Mysore
22
overcast clouds

Social Media

ಸೋಮವಾರ, 17 ಆಗಸ್ಟ್ 2026
Light
Dark

ಸಿಡಬ್ಲ್ಯುಎಂಎ ಆದೇಶ ಪಾಲಿಸಿ ; ಕರ್ನಾಟಕಕ್ಕೆ ಸುಪ್ರೀಂ ಸೂಚನೆ

ಹೊಸದಿಲ್ಲಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಸಂಬಂಧದ ವಿವಾದ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ನೀಡಿರುವ ನಿರ್ದೇಶನವನ್ನು ಪಾಲಿಸಬೇಕು ಎಂದು ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ ೨೪ಕ್ಕೆ ಮುಂದೂಡಿದ್ದು, ಮುಂದಿನ ವಿಚಾರಣೆಯ ವೇಳೆಗೆ ನೀರು ಹರಿವಿನ ಕುರಿತು ಸಮಗ್ರ ಅಂಕಿ-ಅಂಶಗಳೊಂದಿಗೆ ಹಾಜರಾಗುವಂತೆ ಸಂಬಂಧಿತ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ಕರ್ನಾಟಕವು ಸಿಡಬ್ಲ್ಯುಎಂಎ ನಿರ್ದೇಶನವನ್ನು ಸಮರ್ಪಕವಾಗಿ ಜಾರಿಗೊಳಿಸುತ್ತಿಲ್ಲ ಎಂಬುದು ತಮಿಳುನಾಡಿನ ಪ್ರಮುಖ ಆರೋಪವಾಗಿತ್ತು. ಮತ್ತೊಂದೆಡೆ, ಮಳೆಯ ಅನಿಶ್ಚಿತತೆ ಹಾಗೂ ಕರ್ನಾಟಕದ ಜಲಾಶಯಗಳ ಪರಿಸ್ಥಿತಿಯನ್ನು ಉಲ್ಲೇಖಿಸಿ, ತಾನು ಈಗಾಗಲೇ ನೀರು ಹರಿಸುತ್ತಿದ್ದು, ಆದೇಶ ಪಾಲನೆಗೆ ಪ್ರಯತ್ನಿಸುತ್ತಿರುವುದಾಗಿ ಕರ್ನಾಟಕ ವಾದಿಸಿತು. ಇದಕ್ಕೂ ಮೊದಲು, ಜುಲೈ ೨೮ರಂದು ಸಿಡಬ್ಲ್ಯುಆರ್‌ಸಿ, ಕರ್ನಾಟಕವು ೩,೫೦೦ ಕ್ಯೂಸೆಕ್ಸ್ ನೀರನ್ನು ೧೫ ದಿನಗಳ ಕಾಲ ಹರಿಸಬೇಕು ಎಂದು ನಿರ್ದೇಶಿಸಿತ್ತು. ಆ ಆದೇಶದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತಮಿಳುನಾಡು ಆಗಸ್ಟ್ ೩ರಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯವು ಸಿಡಬ್ಲ್ಯುಎಂಎ ಆದೇಶ ಪಾಲನೆ ಪ್ರಕಾರ ೧೨ ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ನಿರ್ದೇಶನ ನೀಡಿದೆ.

ಎರಡೂ ರಾಜ್ಯಗಳ ವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, ಸಿಡಬ್ಲ್ಯುಎಂಎ ನೀಡಿರುವ ನಿರ್ದೇಶನವನ್ನು ಕರ್ನಾಟಕ ಪಾಲಿಸಬೇಕು ಎಂದು ಸೂಚಿಸಿತು. ಆದರೆ ನೀರು ಜಲಾಶಯಗಳಿಂದ ಬಿಡುಗಡೆಯಾಗಿ ಬಿಳಿಗುಂಡ್ಲುವರೆಗೆ ತಲುಪಲು ಮತ್ತು ಅದರ ನೈಜ ಹರಿವಿನ ಪ್ರಮಾಣವನ್ನು ಅಳೆಯಲು ಸಮಯ ಬೇಕಾಗಬಹುದು ಎಂಬ ಅಂಶವನ್ನು ಪರಿಗಣಿಸಿದ ಪೀಠ, ಪ್ರಕರಣದ ವಿಚಾರಣೆಯನ್ನು ಒಂದು ವಾರ ಮುಂದೂಡಿತು. ಕರ್ನಾಟಕ ಸರ್ಕಾರ ಈಗಾಗಲೇ ೧೨ ಸಾವಿರ ಕ್ಯೂಸೆಕ್ಸ್ ಪ್ರಮಾಣವು ರಾಜ್ಯದ ಪರಿಸ್ಥಿತಿಗೆ ಹೆಚ್ಚಿನದಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು. ರಾಜ್ಯದ ಜಲಸಂಪನ್ಮೂಲ ಪರಿಸ್ಥಿತಿ ಹಾಗೂ ತನ್ನ ಅಗತ್ಯಗಳನ್ನು ಪರಿಗಣಿಸದೆ ಈ ಪ್ರಮಾಣದ ನೀರು ಬಿಡುಗಡೆ ಮಾಡುವುದು ಕಷ್ಟಕರ ಎಂಬ ನಿಲುವನ್ನು ಕರ್ನಾಟಕದ ಸಚಿವರು ವ್ಯಕ್ತಪಡಿಸಿದ್ದರು. ಒಟ್ಟಾರೆ ಮುಂದಿನ ಒಂದು ವಾರ ಕಾವೇರಿ ವಿವಾದದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳಿಗೆ ನಿರ್ಣಾಯಕವಾಗಲಿದೆ.

Tags:
error: Content is protected !!