ಮುಜಫರ್‌ಪುರ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು ಅಗೌರವದ ಹೇಳಿಕೆ ನೀಡಿದ ಆರೋಪದಡಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ನ್ಯಾಯಲಯವೊಂದಕ್ಕೆ ದೂರು ನೀಡಲಾಗಿದೆ.
ಸಂಸತ್ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸೋನಿಯಾ ಗಾಂಧಿ ಅವರು, ಬಡಪಾಯಿ ಮಹಿಳೆ, ರಾಷ್ಟ್ರಪತಿಯವರು ಭಾಷಣ ಮುಗಿಸುವ ಹೊತ್ತಿಗೆ ಸುಸ್ತಾಗಿದ್ದರು. ಅವರಿಗೆ ಮಾತನಾಡುವುದೇ ಕಷ್ಟವಾಗಿತ್ತು. ಇದು ಕಳಪೆ ವಿಷಯ ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ರಾಷ್ಟ್ರಪತಿಗೆ ಅಗೌರವ ತೋರಿದ ಆರೋಪದಡಿ ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿ ಮುಜಫರ್ ಪುರ ಮೂಲದ ವಕೀಲ ಸುಧೀರ್ ಓಜಾ ಎಂಬುವವರು ನ್ಯಾಯಾಲಯವೊಂದರಲ್ಲಿ ದೂರು ದಾಖಲಿಸಿದ್ದಾರೆ.
ಇದರ ಜೊತೆಗೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಸಹ ಆರೋಪಿಗಳೆಂದು ಓಜಾ ಹೆಸರಿಸಿದ್ದು, ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಫೆಬ್ರವರಿ.10ರಂದು ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.