Mysore
27
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಸಿಎಂ ಸಿದ್ದರಾಮಯ್ಯ ದಿಲ್ಲಿಗೆ ಪ್ರಯಾಣ : ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಭೇಟಿ ; ಕಾರಣವೇನು?

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಜೂ.23 ) ದೆಹಲಿಗೆ ತೆರಳಿದ್ದು, ನಾಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ.

ರಾಜ್ಯ ಸರ್ಕಾರದ ಹಲವಾರು ಮಸೂದೆಗಳು ನೆನೆಗುದಿಗೆ ಬಿದ್ದಿದ್ದು, ಅವುಗಳಿಗೆ ಸಹಿ ಹಾಕಿಸಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕಾಗಿರುವ ಅನ್ಯಾಯದ ಬಗ್ಗೆಯೂ ದ್ರೌಪದಿ ಮುರ್ಮು ಅವರ ಗಮನ ಸೆಳೆಯುವ ಸಾಧ್ಯತೆಯಿದೆ.

ವ್ಯವಹಾರ ಮಸೂದೆಗಳು ರಾಜಭವನದಲ್ಲೇ ನೆನೆಗುದಿಗೆ ಬಿದ್ದಿವೆ. ಅವುಗಳಿಗೆ ಸಹಿ ಹಾಕುವಲ್ಲಿ ವಿಳಂಬವಾಗುತ್ತಿದ್ದು, ಕೆಲವು ಕಾನೂನು ತೊಡಕುಗಳನ್ನು ಮುಂದೆ ಮಾಡಿ ನೆನೆಗುದಿಯಲ್ಲಿಡಲಾಗಿದೆ. ಜನಪರವಾದ ಕಾನೂನುಗಳನ್ನು ಜಾರಿಗೊಳಿಸಲು ಸಹಕರಿಸಬೇಕು ಎಂದು ಸಿದ್ದರಾಮಯ್ಯ ರಾಷ್ಟ್ರಪತಿಯವರಿಗೆ ಮನವಿ ಮಾಡಲಿದ್ದಾರೆ.

ಒಂದು ವೇಳೆ ರಾಜಭವನ ಮತ್ತು ರಾಷ್ಟ್ರಪತಿ ಭವನದಿಂದ ಸಕಾರಾತಕ ಸ್ಪಂದನೆ ದೊರೆಯದೇ ಇದ್ದರೆ ಅನಿವಾರ್ಯವಾಗಿ ಕಾನೂನು ಸಂಘರ್ಷದ ಹಾದಿ ಹಿಡಿಯಬೇಕಾದ ಪರಿಸ್ಥಿತಿ ಉದ್ಭವಿಸಲಿದೆ. ಹೀಗಾಗಿ ಕೂಡಲೇ ರಾಜ್ಯಸರ್ಕಾರ ವಿಧಾನಮಂಡಲದಲ್ಲಿ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕಬೇಕೆಂದು ಮನವಿ ಮಾಡಲಿದ್ದಾರೆ.

ರಾಜಭವನ ರಾಜಕೀಯ ಕಾರಣಕ್ಕೆ ಬಳಕೆಯಾಗಬಾರದು. ಈ ವಿಚಾರವಾಗಿ ಸ್ಪಷ್ಟ ಸೂಚನೆ ನೀಡಬೇಕು. ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಬೇಕು. ತೆರಿಗೆ ಹಂಚಿಕೆಯಲ್ಲಾಗುತ್ತಿರುವ ಅನ್ಯಾಯಕ್ಕೆ ಸ್ಪಂಧಿಸಬೇಕು, 16ನೇ ಹಣಕಾಸು ಆಯೋಗದಲ್ಲಿ ಒಕ್ಕೂಟ ವ್ಯವಸ್ಥೆಗೆ ಪೂರಕವಾದ ಮತ್ತು ರಾಜ್ಯಗಳಿಗೆ ಅನುಕೂಲಕರವಾದ ಶಿಫಾರಸ್ಸಿನ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ರಾಷ್ಟ್ರಪತಿಯವರಿಗೆ ಮನವಿ ಮಾಡಲಿದ್ದಾರೆ.

ವಿಧಾನಪರಿಷತ್ ಸದಸ್ಯರ ನೇಮಕಾತಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದು, ಇದಕ್ಕೆ ಸಂಬಂಧಪಟ್ಟಂತೆ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ.

ಇದೇ ವೇಳೆ ಇನ್ನೂ ಹಲವಾರು ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಗಮನ ಸೆಳೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೂ ಸಿದ್ದರಾಮಯ್ಯ ಸಮಯ ಕೇಳಿದ್ದಾರೆ. ಆದರೆ ಪ್ರಧಾನಿ ಕಚೇರಿಯಿಂದ ಯಾವುದೇ ಅಧಿಕೃತವಾದ ಸಂವಹನ ನಡೆದಿಲ್ಲ ಎಂದು ಹೇಳಲಾಗಿದೆ.

Tags:
error: Content is protected !!