ನವದೆಹಲಿ: ಕೇರಳದ ವಯನಾಡು ಭೂಕುಸಿತ ದುರಂತವನ್ನು ಕೇಂದ್ರ ಸರ್ಕಾರ ತೀವ್ರ ಸ್ವರೂಪದ ವಿಪತ್ತು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಕೇರಳ ಸರ್ಕಾರದ ಕೋರಿಕೆಯಂತೆ ವಯನಾಡು ಭೂಕುಸಿತವನ್ನು ತೀವ್ರ ಸ್ವರೂಪದ ವಿಪತ್ತು ಎಂದು ಘೋಷಣೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಸ್ವಾಗತಿಸಿದ್ದು, ಇದು ಪುನರ್ವಸತಿಗೆ ಸಹಾಯ ಮಾಡುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ವಯನಾಡು ಭೂಕುಸಿತ ದುರಂತವನ್ನು ತೀವ್ರ ಸ್ವರೂಪದ ವಿಪತ್ತು ಎಂದು ಘೋಷಣೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂತಿಮವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ.
ಇದು ಪುನರ್ವಸತಿಯನ್ನು ಎದುರು ನೋಡುತ್ತಿರುವ ನಿರಾಶ್ರಿತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸರಿಯಾದ ಹೆಜ್ಜೆಯಾಗಿದೆ. ಅದಕ್ಕಾಗಿ ಅಗತ್ಯವಿರುವ ಹಣವನ್ನು ಆದಷ್ಟು ಬೇಗ ಮಂಜೂರು ಮಾಡಬೇಕು. ಅದಕ್ಕಾಗಿ ನಾವೆಲ್ಲರೂ ಕೃತಜ್ಞರಾಗಿರುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಕೇರಳದ ವಯನಾಡಿನಲ್ಲಿ ಕಳೆದ ಜುಲೈನಲ್ಲಿ ಅತ್ಯಂತ ಭೀಕರ ಭೂಕುಸಿತ ಸಂಭವಿಸಿತ್ತು. ನಾಲ್ಕು ಗ್ರಾಮಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದವು.
ಘಟನೆಯಲ್ಲಿ 231 ಮಂದಿ ಸಾವನ್ನಪ್ಪಿದ್ದು, 47 ಮಂದಿ ನಾಪತ್ತೆಯಾಗಿದ್ದಾರೆ. 145 ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದು, 170 ಮನೆಗಳು ಭಾಗಶಃ ನಾಶವಾಗಿದೆ.
ಕೇರಳ ಸಿಎಂ ಪಿಣರಾಯಿ ವಿಜಯನ್ ಮನವಿ ಮಾಡಿದ ಐದು ತಿಂಗಳ ನಂತರ ಕೇಂದ್ರ ಸರ್ಕಾರದಿಂದ ಈ ಘೋಷಣೆ ಹೊರಬಿದ್ದಿದೆ.