ನವದೆಹಲಿ: ಕೇಂದ್ರ ಸರ್ಕಾರ ಒಂದು ದೇಶ, ಒಂದು ಚುನಾವಣೆ ಮಸೂದೆಯನ್ನು ನಾಳೆ(ಡಿಸೆಂಬರ್.17) ಲೋಕಸಭೆಯಲ್ಲಿ ಮಂಡನೆ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರ, ಎಲ್ಲಾ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಉದ್ದೇಶದಿಂದ ಒಂದು ದೇಶ, ಒಂದು ಚುನಾವಣೆಗಾಗಿ ಚಳಿಗಾಲದ ಲೋಕಸಭಾ ಅಧಿವೇಶನದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರುವ ಮಸೂದೆಯನ್ನು ಮಂಗಳವಾರ ಮಂಡಿಸುವ ಸಾಧ್ಯತೆಗಳಿವೆ ಎಂದು ಅಧಿಕಾರಿ ಮೂಲಗಳಿಂದ ತಿಳಿದು ಬಂದಿದೆ.
ಈ ಮಸೂದೆಯನ್ನು ಸಂವಿಧಾನದ 19ನೇ ತಿದ್ದುಪಡಿ ಅಡಿಯಲ್ಲಿ ನಾಳೆ(ಡಿ.17) ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಂಡಿಸಲಿದ್ದಾರೆ ಎಂದು ಕೇಂದ್ರ ಸರ್ಕಾರದ ಉನ್ನತ ಅಧಿಕಾಯೊಬ್ಬರು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದ ನಂತರ ಅದನ್ನು ಜಂಟಿ ಸಂಸದೀಯ ಸಮಿತಿಗೆ ವಹಿಸಲು ಲೋಕಸಭಾಪತಿ ಓಂ ಬಿರ್ಲಾ ಅವರಿಗೆ ಮೇಘವಾಲ್ ಮನವಿ ಮಾಡಲಿದ್ದಾರೆ. ಅಲ್ಲದೇ ವಿವಿಧ ಪಕ್ಷಗಳ ಸಂಸದರ ಸಂಖ್ಯಾಬಲದ ಆಧಾರದ ಮೇಲೆ ಅನುಪಾತದ ಆಧಾರದಲ್ಲಿ ಜಂಟಿ ಸಮಿತಿಯನ್ನು ರಚಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.





