Mysore
27
few clouds

Social Media

ಬುಧವಾರ, 21 ಜನವರಿ 2026
Light
Dark

ಭಾರತಕ್ಕೆ ಬಂದಿಳಿದ ಬ್ರಿಟನ್‌ ಪ್ರಧಾನಿ ; ಜಾಗತಿಕ ವಿಷಯ ಕುರಿತು ಆಳೆ ಮೋದಿ-ಕೀರ್‌ ಮಾತುಕತೆ 

ಮುಂಬೈ : ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್‍ಮರ್ ಅವರು ಎರಡು ದಿನಗಳ ಕಾಲ ಭಾರತಕ್ಕೆ ಬುಧವಾರ ಭೇಟಿ ನೀಡಿದ್ದು, ಮುಕ್ತ ವ್ಯಾಪಾರ ಒಪ್ಪಂದ ಸೇರಿದಂತೆ ಉಭಯ ರಾಷ್ಟ್ರಗಳ ನಡುವಿನ ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಮತ್ತು ಬ್ರಿಟಿಷ್ ವ್ಯವಹಾರಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಲಾಗಿದೆ.

ಇದು ಸ್ಟಾರ್‍ಮರ್ ಅವರ ಭಾರತದ ಮೊದಲ ಅಧಿಕೃತ ಭೇಟಿಯಾಗಿದ್ದು, ಅವರು ನಾಳೆ ಮುಂಬೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಈ ಭೇಟಿಯಲ್ಲಿ ವಿಷನ್ 2035ಗೆ ಅನುಗುಣವಾಗಿ ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ವಿವಿಧ ಅಂಶಗಳಲ್ಲಿನ ಪ್ರಗತಿ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಹಾಗೇ ಪ್ರಾದೇಶಿಕ ಹಾಗೂ ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ.

ಲಂಡನ್‍ನಿಂದ ವ್ಯಾಪಾರ ನಿಯೋಗದೊಂದಿಗೆ ಆಗಮಿಸಿದ ಸ್ಟಾರ್‍ಮರ್ ಅವರನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪ ಮುಖ್ಯಮಂತ್ರಿಗಳಾದ ಏಕನಾಥ್ ಶಿಂದೆ ಮತ್ತು ಅಜಿತ್ ಪವಾರ್ ಹಾಗೂ ರಾಜ್ಯಪಾಲ ಆಚಾರ್ಯ ದೇವವ್ರತ್ ಸ್ವಾಗತಿಸಿದರು.

ಭಾರತ-ಬ್ರಿಟನ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಪ್ರಕ್ರಿಯೆಯ ಭಾಗವಾಗಿ ಮೋದಿ ಮತ್ತು ಸ್ಟಾರ್‍ಮರ್ ನಾಳೆ ಮುಂಬೈನಲ್ಲಿ ಭೇಟಿಯಾಗಲಿದ್ದಾರೆ. ಸಿಇಒ ಫೋರಂ ಸಭೆ ಮತ್ತು ಗ್ಲೋಬಲ್ ಫಿನ್‍ಟೆಕ್ ಫೆಸ್‍ನ 6ನೇ ಆವೃತ್ತಿಯಲ್ಲಿ ಅವರು ಭಾಗವಹಿಸಲಿದ್ದಾರೆ. ಭಾರತಕ್ಕೆ ಬಂದ ತಕ್ಷಣವೇ ಸ್ಟಾರ್‍ಮರ್ ಭಾರತವನ್ನು ಅಪ್ರತಿಮ ಅವಕಾಶಗಳ ನಾಡು ಎಂದು ಹೊಗಳಿದ್ದಾರೆ. ಜೊತೆಗೆ ಭಾರತ ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಬಣ್ಣಿಸಿದ್ದಾರೆ.

ಈ ಭೇಟಿಯಲ್ಲಿ ವಿಷನ್ 2035 ಮಾರ್ಗಸೂಚಿಯಡಿಯಲ್ಲಿ ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ರಕ್ಷಣೆ, ಹವಾಮಾನ ಬದಲಾವಣೆ, ಆರೋಗ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿನಿಮಯದಂತಹ ಕ್ಷೇತ್ರಗಳ ಪ್ರಗತಿಯನ್ನು ಪರಿಶೀಲಿಸಲಾಗುತ್ತದೆ. ಈ ರೋಡ್‍ಮ್ಯಾಪ್ 10 ವರ್ಷಗಳ ಒಳಗೆ ಎರಡು ದೇಶಗಳನ್ನು ಆರ್ಥಿಕವಾಗಿ ಒಗ್ಗೂಡಿಸುವ ಯೋಜನೆಯಾಗಿದ್ದು, ಇದರಿಂದ ಉಭಯ ದೇಶಗಳಿಗೂ ಲಾಭವಾಗುತ್ತದೆ. ಜುಲೈ ಜರುಗಿದ ಭಾರತ-ಯುಕೆ ಸಮಗ್ರ ವ್ಯಾಪಾರ ಒಪ್ಪಂದದ ನಂತರ ಈ ಎರಡು ದಿನಗಳ ಪ್ರವಾಸವು ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಮತ್ತು ಬ್ರಿಟಿಷ್ ಕಂಪನಿಗಳಿಗೆ ಹೊಸ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಹಲವು ನಿಯೋಗಳ ಭೇಟಿ 

ಸ್ಟಾರ್‍ಮರ್ ಜೊತೆಗೆ ಯುಕೆಯ 125 ಪ್ರಮುಖ ಸಿಇಒಗಳು, ಪ್ರಮುಖ ಉದ್ಯಮಿಗಳು, ವಿಶ್ವವಿದ್ಯಾಲಯದ ಉಪಕುಲಪತಿಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಪ್ರತಿನಿಧಿಗಳು ಭಾರತಕ್ಕೆ ಆಗಮಿಸಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಬೆಳವಣಿಗೆ ಮತ್ತು ವಿಸ್ತರಿಸಲು ಅವಕಾಶಗಳನ್ನು ಪಡೆದುಕೊಳ್ಳುವ ಭರವಸೆಯನ್ನು ನಿಯೋಗ ವ್ಯಕ್ತಪಡಿಸಿದೆ. ರೋಲ್?ಸರಾಯ್?ಸ, ಬ್ರಿಟಿಷ್ ಟೆಲಿಕಾಂ, ಡಿಯಾಜಿಯೊ, ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಮತ್ತು ಬ್ರಿಟಿಷ್ ಏರ್ವೇಸ್ ಪ್ರಮುಖ ಸಂಸ್ಥೆಗಳ ಪ್ರತಿನಿಧಿಗಳು ನಿಯೋಗದಲ್ಲಿದ್ದಾರೆ.

ಸ್ಟಾರ್‍ಮರ್ ಅವರ ಪ್ರವಾಸವು ಭಾರತದ ತ್ವರಿತ ಆರ್ಥಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಹತ್ವದ್ದಾಗಿದೆ. ಮೋದಿ ಅವರ ಭೇಟಿಯ ಸಂದರ್ಭದಲ್ಲಿ ಜುಲೈ 23-24ರಂದು ಯುಕೆಯಲ್ಲಿ ನಡೆದ ಒಪ್ಪಂದವು ಎರಡು ದೇಶಗಳ ನಡುವಿನ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದು, ಈಗ ಸ್ಟಾರ್‍ಮರ್ ಅವರ ಭೇಟಿ ಇದರ ಜಾರಿಗೊಳಿಸುವಲ್ಲಿ ಕೊನೆಯ ಪ್ರಯತ್ನವಾಗಿದೆ. ಜುಲೈನಲ್ಲಿ ನಾವು ಭಾರತದೊಂದಿಗೆ ಪ್ರಮುಖ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಇದು ಯಾವುದೇ ದೇಶಕ್ಕಿಂತ ಉತ್ತಮವಾದದ್ದು, ಆದರೆ ಕಥೆ ಅಲ್ಲಿಗೆ ನಿಲ್ಲುವುದಿಲ್ಲ ಎಂದು ಸ್ಟಾರ್‍ಮರ್ ಹೇಳಿದ್ದಾರೆ.

ಅವಕಾಶಗಳ ಮಹಾಪೂರ

ಭಾರತ 2028ರಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದು, ಅದರೊಂದಿಗೆ ವ್ಯಾಪಾರ ತ್ವರಿತ ಮತ್ತು ಸೌಲಭ್ಯಯುತವಾಗುತ್ತದೆ. ಅವಕಾಶಗಳ ಮಹಾಪೂರವೇ ಹರಿದುಬರಲಿದೆ. ಈ ನಿಯೋಗದ ಮೂಲಕ ಯುಕೆಯು ಭಾರತದಲ್ಲಿ ಹೂಡಿಕೆಯನ್ನು ಹೆಚ್ಚಿಸಿ, ತನ್ನ ಜನರಿಗೆ ಹೆಚ್ಚಿನ ಉದ್ಯೋಗಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಮುಂಬೈನಲ್ಲಿ ನಮ 125 ದೊಡ್ಡ ಕಂಪನಿಗಳೊಂದಿಗೆ ಬ್ರಿಟಿಷ್ ವ್ಯಾಪಾರದ ಧ್ವಜವನ್ನು ಹಾರಿಸುತ್ತೇನೆ. ಭಾರತದ ಬೆಳವಣಿಗೆಯೇ ಬ್ರಿಟಿಷ್ ಜನರಿಗೆ ಹೆಚ್ಚಿನ ಆಯ್ಕೆ ಮತ್ತು ಉದ್ಯೋಗಗಳನ್ನು ತಂದು ನೀಡುತ್ತದೆ ಎಂದು ಅವರು ಸೇರಿಸಿದ್ದಾರೆ.

ಸ್ಟಾರ್‍ಮರ್ ಅವರ ಈ ಭೇಟಿಯಿಂದ ಭಾರತ-ಯುಕೆ ಸಂಬಂಧಗಳ ಹೊಸ ಅಧ್ಯಾಯವನ್ನು ತೆರೆದಿಡಲಾಗುತ್ತದೆ. ಜುಲೈ ಒಪ್ಪಂದದಿಂದ ಉಭಯ ದೇಶಗಳ ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುತ್ತದೆ. ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಉಭಯ ದೇಶಗಳ ತಂತ್ರಜ್ಞಾನ ಮತ್ತು ರಕ್ಷಣಾ ಸಹಕಾರವೂ ಚರ್ಚೆಗೆ ಬರುತ್ತದೆ. ಸ್ಟಾರ್‍ಮರ್ ಅವರ ಈ ಪ್ರವಾಸವು ಭಾರತದ ಆರ್ಥಿಕ ಶಕ್ತಿಯನ್ನು ಉಪಯೋಗಿಸಿಕೊಂಡು ಯುಕೆಯು ತನ್ನ ಅಭಿವೃದ್ಧಿಯನ್ನು ತ್ವರಿತಗೊಳಿಸಲು ಅವಕಾಶ ಮಾಡಿಕೊಟ್ಟಿದ್ದು, ಎರಡು ದೇಶಗಳ ನಡುವಿನ ಸ್ನೇಹವನ್ನು ಇನ್ನಷ್ಟು ಬಲಪಡಿಸುತ್ತದೆ.

ಇನ್ನು ಕಳೆದ ಜುಲೈ ತಿಂಗಳಿನಲ್ಲಿ ಬ್ರಿಟ ಗೆ ಬೇಟಿ ನೀಡಿದ್ದ ಮೋದಿ ಅವರು, ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದ್ದರು. ಬಹು ನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಸಂದರ್ಭದಲ್ಲಿ, ಬ್ರಿಟಿಷ್ ಪ್ರಧಾನಿ ಸ್ಟಾರ್‍ಮರ್ ಇದನ್ನು ಐತಿಹಾಸಿಕ ಒಪ್ಪಂದ ಎಂದು ಕರೆದಿದ್ದರು. ಈ ಒಪ್ಪಂದವು ಎರಡೂ ದೇಶಗಳಿಗೆ, ವಿಶೇಷವಾಗಿ ಕಾರ್ಮಿಕರು, ವ್ಯಾಪಾರಿಗಳು ಮತ್ತು ಹೂಡಿಕೆದಾರರಿಗೆ ಪ್ರಯೋಜನಕಾರಿಯಾಗಲಿದೆ. ನಮ ಸಂಬಂಧಗಳಲ್ಲಿ ಐತಿಹಾಸಿಕ ದಿನವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಹಲವು ವರ್ಷಗಳ ಕಠಿಣ ಪರಿಶ್ರಮದ ನಂತರ, ಇಂದು ಎರಡೂ ದೇಶಗಳು ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವನ್ನು ತೀರ್ಮಾನಿಸಿವೆ ಎಂದು ನನಗೆ ಸಂತೋಷವಾಗಿದೆ ಎಂದು ಮೋದಿ ಹೇಳಿದ್ದರು.

ಭಾರತಕ್ಕೆ ಅತಿ ಹೆಚ್ಚು ಲಾಭ 

ರಫ್ತು ವಲಯದಲ್ಲಿ ಭಾರತಕ್ಕೆ ಹೆಚ್ಚಿನ ಲಾಭವಾಗಲಿದೆ. ಒಪ್ಪಂದದ ಅನುಷ್ಠಾನದ ನಂತರ, ಮುಂದಿನ ಕೆಲವು ವರ್ಷಗಳಲ್ಲಿ ಭಾರತದ ರಫ್ತು 10 ರಿಂದ 12 ಶತಕೋಟಿ ಡಾಲರಗಳಷ್ಟು ಹೆಚ್ಚಾಗಬಹುದು. ಇದರರ್ಥ ಸುಮಾರು 86 ಸಾವಿರ ಕೋಟಿಗಳಿಂದ 1.1 ಲಕ್ಷ ಕೋಟಿ ರೂಪಾಯಿಗಳ ಹೆಚ್ಚುವರಿ ವ್ಯಾಪಾರ ಲಾಭಗಳು. ಇದು ಭಾರತೀಯ ಉತ್ಪಾದನೆ ಮತ್ತು ಸೇವಾ ವಲಯವನ್ನು ಬಲಪಡಿಸುತ್ತದೆ.

ಅನೇಕ ಉತ್ಪನ್ನಗಳ ಮೇಲಿನ ಸುಂಕಗಳನ್ನು ಕಡಿಮೆ ಮಾಡಲಾಗುತ್ತದೆ ಅಥವಾ ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ. ಇದು ಭಾರತೀಯ ಕಂಪನಿಗಳಿಗೆ ಬ್ರಿಟಿಷ್ ಮಾರುಕಟ್ಟೆಯಲ್ಲಿ ತಮ ಹಿಡಿತವನ್ನು ಬಲಪಡಿಸಲು ಅವಕಾಶವನ್ನು ನೀಡುತ್ತದೆ. ವಿಶೇಷವಾಗಿ ಜವಳಿ, ಔಷಧ, ಆಟೋ ಬಿಡಿಭಾಗಗಳು ಮತ್ತು ಐಟಿ ವಲಯಗಳು ಈ ಒಪ್ಪಂದದಿಂದ ನೇರ ಲಾಭ ಪಡೆಯಬಹುದು. ಇದು ಭಾರತದಲ್ಲಿ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುತ್ತದೆ.

ಬ್ರಿಟಿಷ್ ಕಂಪನಿಗಳು ಭಾರತದಲ್ಲಿ ಕಡಿಮೆ ವೆಚ್ಚದ ಉತ್ಪಾದನೆ ಮತ್ತು ಸೇವೆಗಳ ಲಾಭವನ್ನು ಪಡೆಯಲಿವೆ. ಅಲ್ಲದೆ, ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಗ್ರಾಹಕ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಬ್ರಿಟಿಷ್ ಕಂಪನಿಗಳು ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಇದು ಎರಡು ದೇಶಗಳ ನಡುವಿನ ವ್ಯಾಪಾರ ಸಮತೋಲನ ಮತ್ತು ಹೂಡಿಕೆ ಹರಿವನ್ನು ಸುಧಾರಿಸುತ್ತದೆ.

Tags:
error: Content is protected !!