ಪಟ್ನಾ : ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಎನ್‌ಡಿಎ ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಲಿದ್ದಾರೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಬುಧವಾರ ಹೇಳಿದ್ದಾರೆ.
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿಯಾದ ಬೆನ್ನಲ್ಲೇ ಬಿಜೆಪಿಯ ಹಿರಿಯ ನಾಯಕರಿಂದ ಈ ಹೇಳಿಕೆ ದಾಖಲಾಗಿದೆ. ಸೀಟು ಹಂಚಿಕೆ ಸಂಬಂಧ ಎನ್‌ಡಿಎ ಮೈತ್ರಿಕೂಟದಲ್ಲಿ ಯಾವುದೇ ಭಿನ್ನಮತವಿಲ್ಲ. ಶೀಘ್ರದಲ್ಲೇ ಸೀಟು ಹಂಚಿಕೆ ಅಂತಿಮಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ : ಬಿಹಾರ ಕುರುಕ್ಷೇತ್ರಕ್ಕೆ ಮುಹೂರ್ತ ಫಿಕ್ಸ್: ಎರಡು ಹಂತದಲ್ಲಿ ಚುನಾವಣೆ
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರೇ ಎನ್‌ಡಿಎ ಮೈತ್ರಿಯ ಮುಖ್ಯಮಂತ್ರಿ ಅಭ್ಯರ್ಥಿ. ಎನ್‌ಡಿಎದಲ್ಲಿ ಎಲ್ಲವೂ ಸರಿಯಾಗಿದ್ದು, ಭಿನ್ನಮತವಿಲ್ಲ. ಸೀಟು ಹಂಚಿಕೆ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಈ ನಡುವೆ ವಿರೋಧ ಪಕ್ಷಗಳ ಮಹಾಘಟಬಂಧನ ಮೈತ್ರಿಯ ವಿರುದ್ಧ ಗಿರಿರಾಜ್ ವಾಗ್ದಾಳಿ ನಡೆಸಿದ್ದಾರೆ. ತೇಜಸ್ವಿ ಯಾದವ್ ಆರ್‌ಜೆಡಿಯ ಮುಖ್ಯಮಂತ್ರಿ ಅಭ್ಯರ್ಥಿ ಆಗಿದ್ದು, ಮಹಾಘಟಬಂಧನ ಮೈತ್ರಿಯ ಅಭ್ಯರ್ಥಿಯಲ್ಲ ಎಂದು ಕಾಂಗ್ರೆಸ್ ಹೇಳಿದೆ. ಇದರಿಂದಾಗಿ ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಚಿಂತಿತರಾಗಿದ್ದಾರೆ. ಮಹಾಘಟಬಂಧನದಲ್ಲಿ ನಾಯಕತ್ವ ಇನ್ನೂ ಅಂತಿಮವಾಗಿಲ್ಲ. ಮತ್ತೊಂದೆಡೆ ಎನ್‌ಡಿಎ ನಾಯಕತ್ವದಲ್ಲಿ ಯಾವುದೇ ಅಸಮಾಧಾನವಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದಾರೆ ಎಂದು ಹೇಳಿದ್ದಾರೆ. ೨೪೩ ಸ್ಥಾನ ಬಲದ ಬಿಹಾರ ವಿಧಾನಸಭೆ ಚುನಾವಣೆ ನವೆಂಬರ್ ೬ ಹಾಗೂ ೧೧ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಬಳಿಕ ನವೆಂಬರ್ ೧೪ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.





