Mysore
15
clear sky

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ದೆಹಲಿಯಲ್ಲೇ ಬೀಡುಬಿಟ್ಟ ವಿಜಯೇಂದ್ರ: ಅಂತಿಮ ಹಂತದ ಕಸರತ್ತು

by vijayendra

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಗೊಂದಲ ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರಗೊಳ್ಳುತ್ತಿದೆ. ರಾಜ್ಯಾಧ್ಯಕ್ಷರ ಆಯ್ಕೆ ವಿಚಾರವಾಗಿ ಹೈಕಮಾಂಡ್ ನಾಯಕರು ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಿ.ವೈ.ವಿಜಯೇಂದ್ರ ಅವರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ.

ಬಿಜೆಪಿ ಅಧ್ಯಕ್ಷ ಸ್ಥಾನದ ಆಯ್ಕೆ ನಿಟ್ಟಿನಲ್ಲಿ ಮುಂದಿನ ವಾರ ಚುನಾವಣೆಯ ನಡೆಯುವ ಸಾಧ್ಯತೆ ಇದೆ. ಈ ಸುಳಿವನ್ನು ಪಡೆದಿರುವ ವಿಜಯೇಂದ್ರ ದಿಢೀರನೆ ದೆಹಲಿಗೆ ದೌಡಾಯಿಸಿದ್ದಾರೆ. ಅಲ್ಲದೆ ದೆಹಲಿಯಲ್ಲಿ ರಾಷ್ಟ್ರ ನಾಯಕರನ್ನು ಭೇಟಿ ಮಾಡಲು ತೆರೆಮರೆಯ ಪ್ರಯತ್ನ ನಡೆಸುತ್ತಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಸಾಕಷ್ಟು ಗೊಂದಲಗಳು ಇವೆ. ತನಗೆ ಅಧ್ಯಕ್ಷ ಪಟ್ಟ ಸಿಗಲಿದೆ ಎಂಬ ವಿಶ್ವಾಸದಲ್ಲಿ ವಿಜಯೇಂದ್ರ ಇದ್ದಾರೆ. ಹೀಗಿದ್ದರೂ, ವಿರೋಧಿ ಬಣದ ತಂತ್ರಗಾರಿಕೆಯ ಬಗ್ಗೆ ಅವರಿಗೆ ಆತಂಕ ಇದೆ. ಹೀಗಾಗಿ ವರಿಷ್ಠರು ಈ ನಿಟ್ಟಿನಲ್ಲಿ ಏನು ಸೂಚನೆ ನೀಡಲಿದ್ದಾರೆ ಎಂಬುವುದು ಅವರಿಗೆ ಸ್ಪಷ್ಟವಾಗಿಲ್ಲ. ದೆಹಲಿ ಭೇಟಿಯ ಸಂದರ್ಭದಲ್ಲಿ ಈ ನಿಟ್ಟಿನಲ್ಲಿ ಅವರು ಮಾತುಕತೆ ನಡೆಸುವ ಪ್ರಯತ್ನ ನಡೆಸಲಿದ್ದಾರೆ. ದೆಹಲಿಯಲ್ಲಿ ತೆರೆಮರೆಯಲ್ಲಿ ನಾಯಕರನ್ನು ಭೇಟಿ ಮಾಡಲು ವಿಜಯೇಂದ್ರ ಈ ಕಾರಣಕ್ಕಾಗಿ ಪ್ರಯತ್ನ ನಡೆಸುತ್ತಿದ್ದು, ಭೇಟಿಗೆ ಅವಕಾಶ ಸಿಕ್ಕಲ್ಲಿ ಗೊಂದಲ ಬಗೆಹರಿಯಲಿದೆ.

ಇನ್ನು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ವಿಚಾರವಾಗಿ ಸೋಮವಾರ ಅಥವಾ ಮಂಗಳವಾರ ವರಿಷ್ಠರಿಂದ ಸಂದೇಶ ಬರುವ ಸಾಧ್ಯತೆ ಇದೆ. ಈಗಾಗಲೇ ಜಿಲ್ಲಾಧ್ಯಕ್ಷರುಗಳ ಆಯ್ಕೆ ಪ್ರತಿಕ್ರಿಯೆ ಮುಕ್ತಾಯಗೊಂಡಿದೆ. ಇದೀಗ ರಾಜ್ಯಾಧ್ಯಕ್ಷರ ಆಯ್ಕೆ ಅಂತಿಮವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಇನ್ನೆರಡು ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುತ್ತಾರಾ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.

ಇನ್ನು ರಾಜ್ಯಾಧ್ಯಕ್ಷರ ಸ್ಥಾನ ಆಯ್ಕೆ ವಿಚಾರದಲ್ಲಿ ಕೆಲವು ಹೆಸರುಗಳು ಮುಂಚೂಣಿಗೆ ಬರುತ್ತಿವೆ. ಕೇಂದ್ರ ಸಚಿವ ವಿ.ಸೋಮಣ್ಣ ಅವರ ಹೆಸರು ಚಾಲ್ತಿಯಲ್ಲಿದೆ. ಆದರೆ, ಇದಕ್ಕೆ ಇನ್ನೂ ಅಂತಿಮ ಮುದ್ರೆ ಬಿದ್ದಿಲ್ಲ. ವಿಜಯೇಂದ್ರ ಅವರ ವಿರುದ್ಧ ರೆಬೆಲ್ ಬಣ ಸಕ್ರಿಯವಾಗಿದ್ದು, ಸೋಮಣ್ಣ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ಚಿತ್ತ ಹೈಕಮಾಂಡ್ ನತ್ತ ನೆಟ್ಟಿದೆ. ಹೈಕಮಾಂಡ್ ಯಾವ ನಿರ್ಧಾರವನ್ನು ಕೈಗೊಳ್ಳಲಿದೆ ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಶೀಘ್ರದಲ್ಲೇ ರಾಜ್ಯಾಧ್ಯಕ್ಷರ ನೇಮಕ ಮಾಡುತ್ತಾರಾ? ಅಥವಾ ಮತ್ತಷ್ಟು ವಿಳಂಬ ಮಾಡುತ್ತಾರಾ? ಎಂಬುವುದು ಇನ್ನೂ ಅಂತಿಮಗೊಂಡಿಲ್ಲ.

Tags:
error: Content is protected !!