ನವದೆಹಲಿ : ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ದೆಹಲಿಯಲ್ಲಿ ಸದ್ಯ ರದ್ದಾಗಿರುವ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ಇದನ್ನು ಪ್ರಶ್ನೆ ಮಾಡಿ ಸಲ್ಲಿಸಿದ್ದ ಅರ್ಜಿ ಕುರಿತು ಸುಪ್ರೀಂ ಕೋರ್ಟ್ ಇಂದು ತೀರ್ಪು ಪ್ರಕಟ ಮಾಡಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ದ್ವಿಸದಸ್ಯರ ಪೀಠವು ಮೇ ೧೭ರಂದು ತೀರ್ಪು ಕಾಯ್ದಿರಿಸಿತ್ತು. ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಚುನಾವಣೆಯ ಪ್ರಚಾರಕ್ಕಾಗಿ ಮೇ ೧೦ ರಂದು ೨೧ ದಿನಗಳ ಕಾಲ ಮಧ್ಯಂತರ ಜಾಮೀನಿನ ಮೇಲೆ ಅವರನ್ನ ಬಿಡುಗಡೆ ಮಾಡುವಂತ ಸುಪ್ರೀಂ ಕೋರ್ಟ್ ಆದೇಶ ಮಾಡಿತ್ತು. ಚುನಾವಣೆ ಪ್ರಚಾರ ಬಳಿಕ ತಿಹಾರ್ ಜೈಲಿಗೆ ಬಂದು ಜೂನ್ ೨ ರಂದು ಕೇಜ್ರಿವಾಲ್ ಶರಣಾಗಿದ್ದರು.
ಆದಾದ ನಂತರ ದೆಹಲಿ ರೌಸ್ ಅವೆನ್ಯೂ ಕೋರ್ಟ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶ ಮಾಡಿತ್ತು. ಆದರೆ ಕೆಳ ನ್ಯಾಯಾಲದ ತೀರ್ಪಿನ ವಿರುದ್ಧ ಇಡಿ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಮತ್ತು ಅದಕ್ಕೆ ತಡೆಯಾಜ್ಞೆ ನೀಡಿತು. ಇಡಿ ಅರ್ಜಿಯನ್ನು ಆಲಿಸಿದ ದೆಹಲಿ ಹೈಕೋರ್ಟ್ ರೌಸ್ ಅವೆನ್ಯೂ ಕೋರ್ಟ್ ತೀರ್ಪಿಗೆ ತಡೆ ನೀಡಿತ್ತು.
ದೆಹಲಿ ಹೈಕೋರ್ಟ್ ತೀರ್ಪನ್ನು ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದರು. ಇಂದು ಅವರ ಅರ್ಜಿ ಮೇರೆಗೆ ವಿಚಾರಣೆ ನಡೆಸಿದ ಕೋರ್ಟ್ ದೆಹಲಿ ಸಿಎಂಗೆ ಮಧ್ಯಂತರ ಜಾಮೀನು ನೀಡಿ ಆದೇಶ ಮಾಡಿದೆ.