ನವದೆಹಲಿ: ಲೋಕಸಭೆಯ ಚುನಾವಣೆಯ ನಂತರ ಕಾಂಗ್ರೆಸ್ ಹಾಗೂ ಆಪ್ ಪಕ್ಷಗಳ ಮಧ್ಯೆ ತೀವ್ರ ಭಿನ್ನಾಭಿಪ್ರಾಯ ಉಂಟಾಗಿದ್ದು, ಕಾಂಗ್ರೆಸ್ ವಿರುದ್ಧ ಆಪ್ ಪಕ್ಷ ಬಂಡಾಯವೆದ್ದಿದೆ.
ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ನಾಯಕರು ವಿವಾದಾತ್ಮಕ ಹೇಳಿಕೆ ನೀಡಿರುವ ಕಾರಣ ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್ ಪಕ್ಷವನ್ನು ಉಚ್ಚಾಟಿಸಬೇಕು ಎಂದು ಆಪ್ ಪಕ್ಷದ ನಾಯಕರು ಇತರ ಪಕ್ಷಗಳ ಜೊತೆ ಮಾತುಕತೆ ನಡೆಸಿದ್ದಾರೆಂದು ವರದಿಯಾಗಿದೆ.
ಕಳೆದ 2013ರಲ್ಲಿ 40 ದಿನಗಳ ಕಾಲ ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷ ಸಹಾಯ ಮಾಡಿದ್ದರಿಂದ ದೆಹಲಿಯಲ್ಲಿ ತನ್ನ ಪ್ರಾಬಲ್ಯ ಕಳೆದುಕೊಂಡಿತು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಜಯ್ ಮಾಕೇನ್ ಅಸಮಾಧಾನದ ಹೇಳಿಕೆ ನೀಡಿದ್ದರು.
ಅಜಯ್ ಮಾಕೇನ್ ಹೇಳಿಕೆಗೆ ನಮ್ಮ (ಆಪ್) ಪಕ್ಷದ ನಾಯಕರು ಅಸಮಾಧಾನಗೊಂಡಿದ್ದಾರೆ ಎಂದು ಆಪ್ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಫೆಬ್ರವರಿ ತಿಂಗಳಿನಲ್ಲಿ ನಡೆಯುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್ ಮತ್ತು ಕಾಂಗ್ರೆಸ್ ಪಕ್ಷ ಪ್ರತ್ಯೇಕವಾಗಿ ಸ್ಪರ್ಧಿಸಲಿವೆ ಎಂಬ ಮಾಹಿತಿ ಲಭ್ಯವಾಗಿದ್ದು, ಇಂಡಿಯಾ ಒಕ್ಕೂಟದಲ್ಲಿ ಮತ್ತೆ ಮತ್ತೆ ಬಿರುಕು ಕಾಣಿಸಿಕೊಳ್ಳುತ್ತಿದೆ.





