ನವದೆಹಲಿ: ದೇಶದ ಜನಸಂಖ್ಯೆಯ ಶೇಕಡಾ.7 ರಷ್ಟು ಜನರು ಮಾದಕ ವಸ್ತುಗಳನ್ನು ಬಳಸುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ಮಾದಕ ವಸ್ತು ಕಾನೂನು ಜಾರಿ ಏಜೆನ್ಸಿಗಳು ಮತ್ತು ಸಮಾಜ ಈ ಸವಾಲನ್ನು ಸಮರ್ಥವಾಗಿ ಎದುರಿಸಬೇಕು ಎಂದು ಕರೆ ನೀಡಿರುವ ಅವರು, ಈ ಪಿಡುಗನ್ನು ಅಂತ್ಯಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಶೇಕಡಾ.7ರಷ್ಟು ಭಾರತೀಯರು ಮಾದಕ ವಸ್ತುಗಳನ್ನು ಕಾನೂನು ಬಾಹಿರವಾಗಿ ಬಳಸುತ್ತಾರೆ. ಮಾದಕ ವಸ್ತುಗಳ ಬಳಕೆ ದೇಶದ ಪೀಳಿಗೆಗಳನ್ನೇ ನಾಶಪಡಿಸುವ ಕ್ಯಾನ್ಸರ್ ಎನಿಸಿದೆ. ನಾವು ಅದನ್ನು ಸೋಲಿಸಬೇಕು. ಈ ಹೋರಾಟಕ್ಕೆ ಕೊಡುಗೆ ನೀಡಲು ಮತ್ತು ಗೆಲ್ಲಲು ಇದು ಸಕಾಲ. ಇಂದು ಈ ಅವಕಾಶವನ್ನು ತಪ್ಪಿಸಿಕೊಂಡರೆ, ಬಳಿಕ ಅದನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
2024ರಲ್ಲಿ ಒಟ್ಟು 16,914 ಕೋಟಿ ರೂ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ಸ್ವತಂತ್ರ ಭಾರತದಲ್ಲಿ ಒಂದು ವರ್ಷದ ಅವಧಿಯಲ್ಲಿ ವಶಪಡಿಸಿಕೊಂಡ ಅತ್ಯಧಿಕ ಮೌಲ್ಯವಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಮಾದಕ ವಸ್ತು ದಂಧೆಯನ್ನು ನಿರ್ಮೂಲನೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದ ಮಾಹಿತಿಯನ್ನು ಇದು ಸಮಾಜಕ್ಕೆ ರವಾನಿಸಲಿದೆ ಎಂದರು.