ನವದೆಹಲಿ: ಅನುಸೂಚಿತ ಜಿಲ್ಲೆಗಳು/ ಪ್ರದೇಶದ ಶಿಕ್ಷಕರಿಗೆ ಶೇ 100ರಷ್ಟು ಮೀಸಲಾತಿ ಒದಗಿಸುವುದು ಅಸಾಂವಿಧಾನಿಕವಾಗಿದ್ದು ಇದರಿಂದ ಶಿಕ್ಷಣ ಗುಣಮಟ್ಟದಲ್ಲಿ ರಾಜಿಯಾದಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ
ಹೀಗಾಗಿ ಜಾರ್ಖಂಡ್‌ನ 13 ಅನುಸೂಚಿತ ಪ್ರದೇಶಗಳ ನಿವಾಸಿಗಳಿಗೆ ಶೇ 100 ಮೀಸಲಾತಿ ಒದಗಿಸಿ ರಾಜ್ಯ ಸರ್ಕಾರ 2016ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ರದ್ದುಗೊಳಿಸಿ ಜಾರ್ಖಂಡ್ ಹೈಕೋರ್ಟ್ 2020ರ ಸೆಪ್ಟೆಂಬರ್‌ನಲ್ಲಿ ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಎತ್ತಿಹಿಡಿದಿದೆ.
“ಆಯಾ ಅಥವಾ ಕೆಲವು ಜಿಲ್ಲೆಗಳ ಶಿಕ್ಷಕರ ಪರವಾಗಿ 100% ಮೀಸಲಾತಿ ನೀಡುವ ಮೂಲಕ ಮತ್ತು ಹೆಚ್ಚು ಅರ್ಹ ಶಿಕ್ಷಕರ ನೇಮಕಾತಿ ನಿಷೇಧಿಸುವ ಮೂಲಕ ಶಾಲೆಗೆ ಹೋಗುವ ಮಕ್ಕಳ ಶಿಕ್ಷಣದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲಾಗದು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈಗಾಗಲೇ ಇಂದ್ರ ಸಾಹ್ನಿ ಮತ್ತು ಚೀಬ್ರೋಲು ರಾವ್ ಪ್ರತ್ಯೇಕ ಪ್ರಕರಣಗಳಲ್ಲಿ ಈ ಕುರಿತಾದ ಕಾನೂನನ್ನು ಈಗಾಗಲೇ ಇತ್ಯರ್ಥಪಡಿಸಲಾಗಿದೆ. ಶೇ 100ರಷ್ಟು ಮೀಸಲಾತಿ ಒದಗಿಸುವುದು ತಾರತಮ್ಯದಿಂದ ಕೂಡಿದ್ದು ಇದನ್ನು ಅನುಮತಿಸಲಾಗದು ಎಂದು ಸರ್ವೋಚ್ಚ ನ್ಯಾಯಾಲಯ ವಿವರಿಸಿದೆ.
ಮುಂದುವರೆದು “ಸಾರ್ವಜನಿಕ ಉದ್ಯೋಗದ ಅವಕಾಶವನ್ನು ಆಕಾಂಕ್ಷಿಗಳಿಗೆ ಅನ್ಯಾಯುತವಾಗಿ ನಿರಾಕರಿಸಲಾಗದು. ಇದು ಕೆಲವರ ವಿಶೇಷ ಹಕ್ಕಲ್ಲ. ನಾಗರಿಕರಿಗೆ ಸಮಾನ ಹಕ್ಕುಗಳಿವೆ. ಒಂದು ವರ್ಗಕ್ಕೆ ಹೆಚ್ಚು ಅವಕಾಶ ನೀಡಿ ಉಳಿದವರನ್ನು ಸಂಪೂರ್ಣವಾಗಿ ಹೊರಗಿಡುವುದನ್ನು ಸಂವಿಧಾನದ ಪಿತಾಮಹರು ಆಲೋಚಿಸಿರಲಿಲ್ಲ” ಎಂದು ಪೀಠ ತಿಳಿಸಿತು.