ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ನಾಡಿಗೆ ಆಗಮಿಸಿದ ಕಳೆದ ಎರಡು ತಿಂಗಳಿನಿಂದ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಜಂಬೂಸವಾರಿಯನ್ನು ಯಶಸ್ವಿಯಾಗಿ ಮುಗಿಸಿ ಇಂದು ಕಾಡಿನತ್ತ ಪಯಣ ಬೆಳೆಸಿದವು.
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಗೊಳಿಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಯನ್ನು ಇಂದು ನಾಡಿನಿಂದ ಬೀಳ್ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಅರಮನೆ ಕೋಡಿ ಸೋಮೇಶ್ವರ ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮೊದಲಿಗೆ ದಸರಾ ಗಜಪಡೆಗಳಾದ ಅಭಿಮನ್ಯು, ಭೀಮ, ಧನಂಜಯ, ಪ್ರಶಾಂತ, ಶ್ರೀಕಂಠ, ಸುಗ್ರೀವ, ಏಕಲವ್ಯ, ಮಹೇಂದ್ರ, ಗೋಪಿ, ಕಂಜನ್, ಹೇಮಾವತಿ, ರೂಪ, ಕಾವೇರಿ ಹಾಗೂ ಲಕ್ಷ್ಮೀ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ವಿವಿಧ ಹಣ್ಣು-ಹಂಪಲು ಹಾಗೂ ಕಬ್ಬನ್ನು ನೀಡಲಾಯಿತು. ಬಳಿಕ ಆನೆಗಳನ್ನು ಒಂದೊಂದರಂತೆ ಲಾರಿಗೆ ಹತ್ತಿಸಿ ಬೀಳ್ಕೊಡಲಾಯಿತು.
ಇದನ್ನೂ ಓದಿ:-ಖ್ಯಾತ ಸಾಹಿತಿ ಡಾ.ಮೊಗಳ್ಳಿ ಗಣೇಶ್ ಅವರ ನಿಧನಕ್ಕೆ ಸಚಿವ ಶಿವರಾಜ ತಂಗಡಗಿ ಶೋಕ
ಅಲ್ಲಿ ನೆರೆದಿದ್ದ ಸಾರ್ವಜನಿಕರು, ಅಭಿಮಾನಿಗಳು, ಅಧಿಕಾರಿಗಳು, ಅರಣ್ಯ ಇಲಾಖೆ ಸಿಬ್ಬಂದಿ ದಸರಾ ಗಜಪಡೆಯನ್ನು ಲಾರಿಗೆ ಹತ್ತಿಸಿ ಒಲ್ಲದ ಮನಸ್ಸಿನಿಂದಲೇ ಕಳುಹಿಸಿಕೊಟ್ಟರು.
ಕಾಡಿನಿಂದ ನಾಡಿಗೆ ಬಂದಿದ್ದ ಮಾವುತರು, ಕಾವಾಡಿಗರ ಕುಟುಂಬವು ಸಹ ಬೇಸರದಿಂದಲೇ ತಮ್ಮ ಬ್ಯಾಗುಗಳನ್ನು ಎತ್ತಿಕೊಂಡು ತಮ್ಮ ತಮ್ಮ ಸ್ವಸ್ಥಾನಕ್ಕೆ ಮರಳಿದರು.
ಈ ವೇಳೆ ಡಿಸಿಎಫ್ ಪ್ರಭುಗೌಡ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.





