ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇಂದು ದಸರಾ ಗಜಪಡೆಗೆ ಜಂಬೂಸವಾರಿ ರಿಹರ್ಸಲ್ ನಡೆಸಲಾಯಿತು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಸಂಭ್ರಮ ಕಳೆಗಟ್ಟಿದ್ದು, ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಗೆ ದಿನಗಣನೆ ಆರಂಭವಾಗಿದೆ.
ಇದನ್ನು ಓದಿ: ಕೋಟೆಯಲ್ಲಿ ಜನಾಕರ್ಷಿಸುತ್ತಿರುವ ಮಿನಿ ದಸರಾ
ಈ ಹಿನ್ನೆಲೆಯಲ್ಲಿ ಇಂದು ಜಂಬೂಸವಾರಿ ಮೆರವಣಿಗೆಯ ಪೂರ್ವಭಾಗಿಯಾಗಿ ಅರಮನೆ ಅಂಗಳದಲ್ಲಿ ಜಂಬೂಸವಾರಿ ತಾಲೀಮಿನಲ್ಲಿ ಅಭಿಮನ್ಯುವಿಗೆ ರಿಹರ್ಸಲ್ ನಡೆಸಲಾಯಿತು.
ಡಿಸಿಎಫ್ ಡಾ.ಪ್ರಭುಗೌಡ ಸೇರಿದಂತೆ ಪೊಲೀಸರು ಹಾಗೂ ಅಧಿಕಾರಿಗಳು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಪುಷ್ಪಾರ್ಚನೆ ಸಲ್ಲಿಸಿದರು. ಜಂಬೂಸವಾರಿ ಮೆರವಣಿಗೆಯ ದೂರ ಹಾಗೂ ಸಮಯ ಪಾಲಿಸುವ ನಿಟ್ಟಿನಲ್ಲಿ ಈ ರಿಹರ್ಸಲ್ ನಡೆಸಲಾಯಿತು.
ತಾಲೀಮಿನಲ್ಲಿ ದಸರಾ ಗಜಪಡೆಯೊಂದಿಗೆ ಪೊಲೀಸ್ ಅಶ್ವರೋಹಿ ದಳದ ಸಿಬ್ಬಂದಿ ಹಾಗೂ ಪೊಲೀಸರು ಭಾಗಿಯಾಗಿದ್ದರು.





