ಮೈಸೂರು : ಚಿತ್ರಗಳ ಮೂಲಕ ಸಾಮಾಜಿಕ ಸಂದೇಶವನ್ನು ಕೊಡುವಂತಹ ಕೆಲಸ ಕಲೆಯಿಂದ ಮಾತ್ರ ಸಾಧ್ಯ ಎಂಬುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಕಲೆಗೆ ಬೆಲೆ ಕಟ್ಟಲು ಯಾವ ಕಾಲಕ್ಕೂ ಸಾಧ್ಯವಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ಎಸ್ ತಂಗಡಗಿ ಹೇಳಿದರು.
ಇಂದು ಮೈಸೂರು ದಸರಾ ಮಹೋತ್ಸವ ಲಲಿತಾ ಮತ್ತು ಕರಕುಶಲ ಕಲೆ ಉಪಸಮಿತಿಯ ವತಿಯಿಂದ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು(ಕಾವಾ) ನಲ್ಲಿ ಆಯೋಜಿಸಲಾಗಿದ್ದ ತೊಗಲು ಗೊಂಬೆ ಭಿತ್ತಿ ಚಿತ್ರಕಲಾ ಶಿಬಿರ ಮತ್ತು ಮೈಸೂರು ಶೈಲಿಯ ಸಾಂಪ್ರದಾಯಿಕ ಚಿತ್ರಕಲೆ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾವಾ ಎಂಬುದು ವಿಶಿಷ್ಟವಾದ ಒಂದು ವಿಶೇಷ ಸಂಸ್ಥೆಯಾಗಿದೆ. ರಾಜ್ಯದಲ್ಲಿ ಹೆಸರು ಮಾಡಿದಂತಹ ಒಂದು ಉತ್ತಮ ಸಂಸ್ಥೆ ಎಂದು ಹೇಳಿದರೆ ತಪ್ಪಾಗಲಾರದು. ಕಾವ ಕಾಲೇಜು ರಾಜರ ಪ್ರಥಮ ದರ್ಜೆಯ ಕಾಲೇಜು ಎಂದೇ ಪ್ರಸಿದ್ಧಿ ಪಡೆದಿದ್ದು, ವಿದ್ಯಾರ್ಥಿಯ ಜೊತೆಗೆ ಕೌಶಲ್ಯ ಸಂವರ್ಧನೆ ಮಾಡಿ, ದೃಶ್ಯ ಕಲೆಯನ್ನು ಅಭಿವೃದ್ಧಿಪಡಿಸುವುದು ಈ ಸಂಸ್ಥೆಯ ಉದ್ದೇಶವಾಗಿದೆ ಎಂದು ಹೇಳಿದರು.
ಕಲೆಯನ್ನು ವಿನ್ಯಾಸ ಮಾಡುವಂತಹ ಫ್ಯಾಕ್ಟರಿ ಇದು. ಮೈಸೂರು ವಿಶ್ವವಿದ್ಯಾಲಯದಲ್ಲಿ ಶಾಶ್ವತ ಯೋಜನೆಯನ್ನು ಪಡೆದಂತಹ ಸಂಸ್ಥೆಯಾಗಿದೆ ಎಂದರು.
ಇದನ್ನೂ ಓದಿ :-https://andolana.in/mysore-dasara-2025/mysuru-dasara-dasara-book-fair-kicks-off/
ಈ ಕಾಲೇಜಿನಲ್ಲಿ ಕಲಿತಂತಹ ವ್ಯಕ್ತಿಗಳು ವಿವಿಧ ಕ್ಷೇತ್ರಗಳಲ್ಲಿ ವಿನ್ಯಾಸಕಾರಾಗಿ ಕೆಲಸ ಮಾಡುತ್ತಿದ್ದಾರೆ. ಸಂಸ್ಥೆಯಲ್ಲಿ 59 ಹುದ್ದೆಗಳು ಖಾಲಿ ಇದ್ದು ಅದರಲ್ಲಿ ಬರಿ 16 ಹುದ್ದೆಗಳು ಮಾತ್ರ ಭರ್ತಿ ಯಾಗಿದೆ ಅವುಗಳನ್ನು ಮುಂದಿನ ದಿನಮಾನಗಳಲ್ಲಿ ಭರ್ತಿ ಮಾಡುವಂತಹ ಕೆಲಸ ಮಾಡುತ್ತೇನೆ. ಈ ಸಂಸ್ಥೆ ಬೆಳೆಸುವಲ್ಲಿ ನಾನು ಕೆಲಸ ಮಾಡುತ್ತೇನೆ. ಈ ಸಂಸ್ಥೆಯಲ್ಲಿ ಒಂದು ಕಲಾ ಗ್ಯಾಲರಿಯನ್ನು ನಿರ್ಮಾಣ ಮಾಡಲಾಗುವುದು. ರಾಜರ ಒಂದು ದೊಡ್ಡ ಸಂಸ್ಥೆ ಎಂದರೆ ಕಾವಾ. ಈ ಸಂಸ್ಥೆಯನ್ನು ಕಟ್ಟುವುದಕ್ಕೆ ನನ್ನಿಂದ ಏನೇನು ಸಾಧ್ಯತೆ ಇದೆ ಅದನ್ನು ನಾನು ಮಾಡುತ್ತೇನೆ ಎಂದರು.
ನಮ್ಮ ರಾಜ್ಯದಲ್ಲಿ ಕಲೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತಿದ್ದು, ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಬೇಕು. ಕಲೆಯನ್ನು ತೋರಿಸಿ ಬೋರ್ಡ್ ಗೆ ಹಾಕಿದರೆ ಸಾಲದು, ಅವುಗಳ ಸಂದೇಶವನ್ನು ತಲುಪಿಸಬೇಕು ಎಂಬ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡುತ್ತಿರುವುದು ನಿಜಕ್ಕೂ ಒಂದು ಉತ್ತಮವಾದಂತಹ ಕೆಲಸವಾಗಿದೆ. ಕೈ ಇಂದ ಮಾಡಿದಂತಹ ಕಲೆ ಎಲ್ಲ ಕಾಲಕ್ಕೂ ಪ್ರಸ್ತುತ ಅದಕ್ಕೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.
ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಮಾತನಾಡಿ ಕಾವಾ ಸಂಸ್ಥೆಯು ತನ್ನದೇ ಆದ ಕಲೆ ಇದೆ. ಈ ಸಂಸ್ಥೆಯನ್ನು ನಾವು ವಿಶ್ವವಿದ್ಯಾಲಯ ಮಟ್ಟಕ್ಕೆ ತಲುಪುವಂತೆ ಮಾಡಬೇಕು. ಬೇರೆ ತಂತ್ರಜ್ಞಾನ ಬಂದು ಕಲೆ ನಶಿಸಿಹೋಗುತ್ತಿದೆ. ಕೈಯಿಂದ ಶ್ರಮ ಹಾಕಿ ಮಾಡುವಂತಹ ಕೆಲಸಕ್ಕೆ ನಾವು ಗೌರವವನ್ನು ಕೊಡಬೇಕು. ಕಲೆಗೆ ಹೆಚ್ಚಿನ ಜೀವ ತುಂಬುವ ಕೆಲಸಕ್ಕೆ ನಾವೆಲ್ಲರೂ ಸಹಕರಿಸಲು ಮುಂದಾಗಬೇಕು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಡಾ. ವೆಂಕಟೇಶ್ ಎಂ.ವಿ. ಅವರು ಮಾತನಾಡಿ ಕಾವಾ ಸಂಸ್ಥೆಯು ತಮ್ಮಲ್ಲಿ ಇರುವಂತಹ ಕ್ರಿಯಾಶೀಲತೆಯನ್ನು ಹೊರ ತರಲು ಒಂದು ಉತ್ತಮ ಸಂಸ್ಥೆಯಾಗಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಬದುಕನ್ನು ಕಟ್ಟಿಕೊಟ್ಟಂತಹ ಸಂಸ್ಥೆಯಾಗಿದೆ. ತಂತ್ರಜ್ಞಾನಕ್ಕೆ ನೂತನ ಕಲ್ಪನೆ ಮಾಡುವುದಕ್ಕೆ ಸಾಧ್ಯವಿಲ್ಲ ಆದರೆ ಮನುಷ್ಯನಿಗೆ ಅದು ಸಾಧ್ಯ. ಆದ್ದರಿಂದ ಈ ಸಂಸ್ಥೆ ಇಂದಿಗೂ ಸಹ ನೂತನ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ, ವಿಧಾನ ಪರಿಷತ್ ನ ಶಾಸಕರಾದ ಕೆ. ವಿವೇಕಾನಂದ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಪ. ಸ. ಕುಮಾರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಎಂ.ಸಿ. ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಕೆ. ಎಂ ಗಾಯತ್ರಿ ಸೇರಿಂದಂತೆ ಮತ್ತಿತರರು ಉಪಸ್ಥಿತರಿದ್ದರು.





