ಮೈಸೂರು : ನಾಡಹಬ್ಬ ಮೈಸೂರು ದಸರಾ ವಿಜಯದಶಮಿ ಮೆರವಣಿಗೆಯ ಪ್ರಮುಖ ಆಕರ್ಷಣೆ ಜಂಬೂ ಸವಾರಿಯೊಂದಿಗೆ ಸಂಪನ್ನಗೊಂಡಿದೆ. ಇದಲ್ಲದೆ ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಕ್ರಷ್ಣದತ್ತ ಚಾಮರಾಜ ಒಡೆಯರ್ ನಡೆಸುತ್ತಿದ್ದ ಖಾಸಗಿ ದರ್ಬಾರ್ ಕೂಡ ಅಂತ್ಯಗೊಂಡಿದೆ.
ಮೈಸೂರು ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇಗುಲದ ಬಳಿ ಇರುವ ಬನ್ನಿ ಮರಕ್ಕೆ ಯದುವೀರ್ ಅವರು ಶಮೀ ಪೂಜೆ ನೆರವೇರಿಸಿದರು. ವಜ್ರಮುಷ್ಠಿ ಕಾಳಗ ಮುಕ್ತಾಯವಾಗುತ್ತಿದ್ದಂತೆ ಭುವನೇಶ್ವರಿ ದೇವಾಲಯದವರೆಗೆ ವಿಜಯಯಾತ್ರೆ ನಡೆಯಿತು. ಬಳಿಕ ಯದುವೀರ್ ಒಡೆಯರ್, ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು. ಪೂಜೆ ಮುಕ್ತಾಯವಾಗುತ್ತಿದ್ದಂತೆ ಯದುವೀರ್ ಅರಮನೆಗೆ ವಾಪಸ್ ಆದರು. ಇದರೊಂದಿಗೆ ಅರಮನೆ ದಸರಾ ಮುಕ್ತಾಯಗೊಂಡಿದೆ.
ಇದನ್ನು ಓದಿ : Mysuru Dasara | ಬನ್ನಿಮಂಟಪ ತಲುಪಿದ ಜಂಬೂಸವಾರಿ
ಪೊಲೀಸ್ ಬ್ಯಾಂಡ್ ಜೊತೆಗೆ ಪಟ್ಟದ ಆನೆ, ಕುದುರೆ, ಹಸು ವಿಜಯಯಾತ್ರೆಯಲ್ಲಿ ಭಾಗಿಯಾಗಿದ್ದವು. ಖಾಸಾ ಆಯುಧಗಳನ್ನು ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ಮಾಡಲಾಯಿತು. ಶ್ರೀಕಂಠದತ್ತ ಒಡೆಯರ್ ಬಳಸುತ್ತಿದ್ದ ಕಾರಿನಲ್ಲಿ ಯದುವೀರ್ ವಿಜಯಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಈ ವರ್ಷ ೧೧ ದಿನ ದಸರಾ ಆಚರಣೆ ಕಂಡಿದೆ. ಇಷ್ಟು ದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ದಸರಾ ಕ್ರೀಡಾಕೂಟ, ದಸರಾ ಕುಸ್ತಿ, ಯುವದಸರಾ, ಫಲಪುಷ್ಪ ಪ್ರದರ್ಶನ ಮುಂತಾದುವುಗಳು ನಡೆದವು. ಚಾಮುಂಡೇಶ್ವರಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು.





