ಮೈಸೂರು : ಇಸ್ಲಾಂ ಧರ್ಮದ ಬಗ್ಗೆ ನನಗೆ ನಂಬಿಕೆಯಿಲ್ಲವೆಂದು ಹೇಳಿ ಲೇಖಕಿ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಲಿ. ಇಲ್ಲದಿದ್ದರೆ ದಸರಾ ಉದ್ಘಾಟನೆಯಿಂದ ಹಿಂದೆ ಸರಿದು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಮಾಡಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರ್ತಿ ಪೂಜೆಗೆ ಬರುತ್ತಿರುವ ಬಾನು ಮುಷ್ತಾಕ್ ವಿರುದ್ಧ ಮೌಲ್ವಿಗಳು ಏನು ಕ್ರಮ ಕೈಗೊಳ್ಳುತ್ತೀರಾ? ಮೌಲ್ವಿಗಳು ಈ ಬಗ್ಗೆ ಉತ್ತರ ನೀಡಬೇಕು. ಅಥವಾ ನಾನು ಯಾಕೇ ಮುಸ್ಲಿಂ ಎಂದು ಬಾನು ಮುಷ್ತಾಕ್ ಘೋಷಣೆ ಮಾಡಬೇಕು. ಇಡೀ ವಿಶ್ವದಾದ್ಯಂತ ಯಾಕೆ ಮುಸ್ಲಿಂ ಸಮುದಾಯ ಎಂಬ ಪ್ರತ್ಯೇಕ ಸಮುದಾಯ ಹುಟ್ಟಿಕೊಳ್ಳುತ್ತಿದೆ. ಇಸ್ಲಾಂ ಧರ್ಮವನ್ನು ಒಪ್ಪದವರು ಇದರಲ್ಲಿದ್ದಾರೆ ಎಂದರು.
ಎಫ್‌ಐಆರ್‌ಗೆ ಹೆದರುವುದಿಲ್ಲ
ತಮ್ಮ ಮೇಲೆ ಎಫ್‌ಐಆರ್ ಹಾಕಿರುವ ಬಗ್ಗೆ ಮಾತನಾಡಿ, ಮದ್ದೂರಿಗೆ ಕಾರ್ಯಕರ್ತರು ಬರುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ ನಾನು ಹೋಗಿದ್ದೆ. ಅಲ್ಲಿರುವ ಮಸೀದಿ ಅಕ್ರಮವಾಗಿದ್ದು, ಆ ಕಡೆಯಿಂದಲೇ ಕಲ್ಲು ಹೊಡೆದಿದ್ದಾರೆ. ನಾನು ಈ ಹಿಂದೆಯೇ ಅಕ್ರಮ ಮಸೀದಿಗಳ ತಪಾಸಣೆ ಮಾಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆದರೆ, ಅದು ಆಗಿಲ್ಲ. ನಿನ್ನೆ ಮದ್ದೂರಿನಲ್ಲಿ ನನ್ನ ವಿರುದ್ಧ ಎಫ್‌ಐಆರ್ ಹಾಕಿದ್ದಾರೆ. ಈಗಾಗಲೇ ೭೦ ಕೇಸ್‌ಗಳಿವೆ. ಇದಕ್ಕೆ ಹೆದರುವುದಿಲ್ಲ. ಎಷ್ಟು ಕೇಸ್ ಬೇಕಾದರೂ ಹಾಕಿಕೊಳ್ಳಲಿ ಎಂದು ಹೇಳಿದರು.
ರಾಜ್ಯದಲ್ಲಿ ಇನ್ನೂ ಹೊಂದಾಣಿಕೆ ರಾಜಕಾರಣ ಇದೆ. ಇನ್ನಾದರೂ ಬಿಜೆಪಿ ಹೈಕಮಾಂಡ್ ಎಚ್ಚೆತ್ತುಕೊಳ್ಳಬೇಕು. ಯಡಿಯೂರಪ್ಪ ಹಾಗೂ ವಿಜಯೇಂದ್ರ ಒತ್ತಡಕ್ಕೆ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದರು. ಈಗ ಕೇಂದ್ರದ ನಾಯಕರಿಗೂ ಕೂಡ ತಪ್ಪು ಮಾಡಿದೆ ಎಂದು ಎನಿಸಿದೆ. ಮದ್ದೂರಿನಲ್ಲಿ ನನಗೆ ಸಿಕ್ಕ ಪ್ರೀತಿ ನೋಡಿ ಎಲ್ಲರಿಗೂ ಜ್ಞಾನೋದಯವಾಗಿದೆ. ರಾಜ್ಯದಲ್ಲಿ ೨೦೨೮ಕ್ಕೆ ಕ್ರಾಂತಿಯಾಗುತ್ತದೆ. ಎಲ್ಲರೂ ಕೂಡಿ ಬದಲಾವಣೆ ತರುತ್ತೇವೆ ಎಂದರು.
ಬಿಜೆಪಿ ಹೈಕಮಾಂಡ್ ಭೇಟಿ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಬಿಜೆಪಿ ಹೈಕಮಾಂಡನ್ನು ಭೇಟಿ ಮಾಡುವುದಿಲ್ಲ. ನಮ್ಮ ಜತೆ ಬಿಜೆಪಿಯ ಎಲ್ಲರೂ ಇದ್ದಾರೆ. ಪೂಜ್ಯ ತಂದೆ ಮತ್ತು ಮಗ ಇಬ್ಬರನ್ನು ಬಿಟ್ಟರೆ ನಮ್ಮ ಜತೆ ಎಲ್ಲರೂ ಇದ್ದಾರೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಲಿಂಗಾಯತ ಸಮುದಾಯಕ್ಕೆ ಯಡಿಯೂರಪ್ಪನವರ ಕೊಡುಗೆ ಏನು? ಒಕ್ಕಲಿಗ ಸಮುದಾಯಕ್ಕೆ ಡಿ.ಕೆ.ಶಿವಕುಮಾರ್ ಕೊಡುಗೆ ಏನು? ಕಾಂಗ್ರೆಸ್‌ಗೆ ಯಾವ ಹಿಂದೂಗಳು ವೋಟ್ ಹಾಕಿಲ್ಲವೇ? ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯದಲ್ಲೂ ನೇಪಾಳ ರೀತಿ ಆಗುತ್ತದೆ ಎಂದು ಎಚ್ಚರಿಸಿದರು.
ಮದ್ದೂರಿನ ಕಲ್ಲು ತೂರಾಟ ಪ್ರಕರಣದಲ್ಲಿ ಹಿಂದೂಗಳದ್ದು ತಪ್ಪಿಲ್ಲ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ. ಇದನ್ನು ಸ್ವಾಗತಿಸುತ್ತೇನೆ. ಆದರೆ, ರಾಜ್ಯದಲ್ಲಿ ಹಿಂದುಗಳಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು, ಇಲ್ಲದಿದ್ದರೆ ರಾಜ್ಯಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದರು.
ಶಾಸಕ ಪ್ರದೀಪ್ ಈಶ್ವರ್ ಕೋತಿ ಹೇಳಿಕೆಗೆ ಉತ್ತರ ಕೊಡಲ್ಲ, ನಾನು ಮನುಷ್ಯರ ಹೇಳಿಕೆಗೆ ಅಷ್ಟೇ ಉತ್ತರ ಕೊಡುತ್ತೇನೆ. ಯಾರು ಕೋತಿ ಎಂದು ಜನರಿಗೆ ಗೊತ್ತಿದೆ. ಸುಧಾಕರ್ ಎಂಪಿಯಾದರೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದರು. ಆದರೆ, ವರ್ಷವಾದರೂ ಕೊಟ್ಟಿಲ್ಲ. ನನ್ನ ಉತ್ತರ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಯಡಿಯೂರಪ್ಪನವರಿಗೆ ಮಾತ್ರ ಎಂದರು.





