Mysore
29
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

Mysuru Dasara | ಅರಮನೆ ಅಂಗಳದಲ್ಲಿ ಮೇಳೈಸಿದ ಜಾನಪದ ಗಾನ ವೈಭವ

ಮೈಸೂರು : ಮೈಸೂರು ರಾಜ್ಯದ ದೊರೆಯೇ .. ರಣಧೀರ ನಾಯಕನೇ… ನಿನ್ನಂತವನ್ಯಾರೂ ಇಲ್ವಲ್ಲೋ.. ಲೋಕದ ದೊರೆ ಎಂಬ ಹಾಡಿಗೆ ನೆರೆದಿದ್ದ ಪ್ರೇಕ್ಷಕರು ಮನಸೋತು ನಿಂತ ನಿಂತಲ್ಲೇ‌ ಕುಣಿದು ಕುಪ್ಪಳಿಸಿದರೇ, ಮೈಸೂರಿನ ಚಿಕ್ಕ‌ಗಡಿಯಾರದ ಮುಂಭಾಗದಲ್ಲೇ ಚಿತ್ರೀಕರಣಗೊಂಡಿರುವ‌ ಕನ್ನಡ ನಾಡು‌ ನುಡಿ ಕುರಿತು ಬರೆದಿರುವ ಬಾರಿಸು ಕನ್ನಡ ಡಿಂಡಿಮವ.. ಓ ಕರ್ನಾಟಕ ಹೃದಯ ಶಿವಾ.. ಹಾಡು ನೆರೆದಿದ್ದವರನ್ನು ಮೋಡಿ ಮಾಡಿತು.

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಅರಮನೆ ಅಂಗಳದಲ್ಲಿ ಸಾಂಸ್ಕೃತಿಕ‌ ಉಪ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ಗಾನ ವೈಭವ ಶೀರ್ಷಿಕೆಯಡಿಯಲ್ಲಿ ಅತ್ಯುತ್ತಮ‌ ನಟಿ, ರಂಗಭೂಮಿ‌ ಕಲಾವಿದೆ ಹಾಗೂ ಪ್ರಸಿದ್ಧ ಗಾಯಕಿಯವರಾದ ಅನನ್ಯ ಭಟ್ ಮತ್ತು ತಂಡದವರಿಂದ ಉತ್ತಮ ಆಯ್ದ ಜಾನಪದ ಗಾನಸುಧೆ ಹರಿಸುವ ಮೂಲಕ ನೆರೆದಿದ್ದವರನ್ನು ಮೋಡಿ ಮಾಡಿದರು.

ಇದಕ್ಕೂ ಮೊದಲಿಗೆ ಗಜವದನ ಹೇ ರಂಭಾ.. ಎಂಬ ರಂಗ ಗೀತೆ ನೆರೆದಿದ್ದವರನ್ನು ಹಿಡಿದಿಟ್ಟುಕೊಳ್ಳುವುದಲ್ಲದೇ, ಕೆಜಿಎಫ್ ಚಿತ್ರದ ಧೀರ ಧೀರ ಈ ಸುಲ್ತಾನ ಎಂಬ ಹಾಡಿಗೆ ಅದ್ಭುತವಾದ ಎಂಟ್ರಿ ಪಡೆದುಕೊಂಡರು. ಅಲ್ಲದೇ ಬೆಟ್ಟದ ಮೇಲಿನ ಮಹದೇವ ಕುರಿತ ಶರಣು ಶರಣಯ್ಯ ಎಂಬ ಕಂಸಾಳೆ ಪದಕ್ಕೆ ವೀಕ್ಷಕರೆಲ್ಲರೂ ದನಿಗೂಡಿಸುವುದರ ಜೊತೆಗೆ ಸಂತೋಷದಿಂದ ಹೆಜ್ಜೆ ಹಾಕಿದರು.

ಇದನ್ನೂ ಓದಿ:-ಭಾವತಂತು ತುಂಡಾದಂತೆ ಭಾಸವಾಗುತ್ತಿದೆ…. ʻಆವರಣʼ ಕಾದಂಬರಿ ರಚನೆಗೆ ತಮ್ಮ ಮನೆಗೇ ಬಂದಿದ್ದ ʻಭೈರಪ್ಪʼನವರ ಕುರಿತು ಭಾನುಮುಪ್ತಾಕ್‌…

ಅನೂಪ್ ಸೀಳಿನ್ ಅವರ ಸಂಗೀತ ನಿರ್ದೇಶನದ ಡಾ.ವಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವುಳ್ಳ ವೀರಂ ಚಿತ್ರದ ಎಲ್ಲರ ಮೆಚ್ಚುಗೆ ಗಳಿಸಿರುವಂತಹ ಕೇಳೋ‌ ಮಾದೇವ… ಶಿವಾ..ಶಿವಾ.. ಹರ..ಹರ.. ಹಾಡಿನ ಮೋಡಿಗೆ ಮೈಸೂರು ಜನರ ಕಣ್ಣಲ್ಲಿ ಭಾವೋದ್ವೇಗದೊಂದಿಗೆ ಮಂತ್ರ ಮುಗ್ದರನ್ನಾಗಿಸಿತು.

ಸಾಹಿತಿ ಬಿ.ಆರ್.ಲಕ್ಷ್ಮಣರಾವ್ ಅವರ ಮೃತ್ಯುಂಜಯ ದೊಡ್ಡವಾಡ ಅವರ ಸಂಗೀತ ಸಂಯೋಜನೆಯುಳ್ಳ ಜಾನಪದ ಗೀತೆಯಾದ ಬಾಳ ಕಡಲಿನಲ್ಲಿ ಎರಡು ಪ್ರೀತಿಯ ದೋಣಿ.., ಅತೀ ಹೆಚ್ಚು ಯಶಸ್ಸನ್ನು ಕಂಡಿರುವ ಮತ್ತು ಕಿರಿಯರಿಂದ ಹಿರಿಯರವರೆಗೂ ಮೋಡಿ ಮಾಡಿರುವ ಸೋಜುಗಾರ ಸೂಜಿ ಮಲ್ಲಿಗೆ, ಮಹದೇವ ನಿಮ್ಮ ಮಂಡೆ‌ ಮೇಲೆ ದುಂಡು ಮಲ್ಲಿಗೆ ಹಾಡನ್ನು ಹಾಡಿನ ಮೋಡಿಯೊಂದಿಗೆ ಉಲ್ಟಾ ಚಿತ್ರ ರಚನೆಯಲ್ಲಿ ವರ್ಲ್ಡ್ ರೆಕಾರ್ಡ್ ಮಾಡಿರುವ ಕುರುಬಾರಹಳ್ಳಿ‌ಯ ಕಲಾವಿದರಾದ ಪುನೀತ್ ಅವರ ಶಿವನ ಚಿತ್ರವೂ ನೆರೆದವರನ್ನು ಆಕರ್ಷಿಸಿತು‌.

ಇದಕ್ಕೂ‌ ಮುನ್ನ ಕರ್ನಾಟಕ ಕಲಾಶ್ರೀಯವರಾದ ಡಾ. ರಾ.ಸಾ. ನಂದಕುಮಾರ್ ಮತ್ತು ಕಾಳಿದಾಸ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ರಘುಪತಿ ಭಟ್ ಅವರಿಂದ ಗೀತಾ ಚಿತ್ರಗಳ ಕುರಿತಾಗಿ ಸಂಗೀತದೊಂದಿಗೆ ಭಗವತ್ ಗೀತೆಯ 11ನೇ‌ ಅಧ್ಯಾಯದಲ್ಲಿರುವ ವಿಶ್ವರೂಪ ದರ್ಶನವನ್ನು ಅನಾವರಣಗೊಳಿಸಿದರು.

ಶ್ರೀ ಸಾಯಿ ಶಿವ್ ಲಕ್ಷ್ಮಿಕೇಶವ ಮತ್ತು ತಂಡದವರಿಂದ ಕರ್ನಾಟಕ ಫ್ಯೂಷನ್ ವಾದ್ಯ ಸಂಗೀತವನ್ನು ಹಾಗೂ ಡಾ.ಮೈಸೂರು ಮಂಜುನಾಥ್ ಮತ್ತು ತಂಡದವರಿಂದ ವಯೋಲಿನ್ ಟ್ರಯೋ ಮಧುರವಾಗಿ ನುಡಿಸಿದರು.

ಇದಕ್ಕೂ‌ ಮುನ್ನವೇ ಚಂದನ ಕಲಾತಂಡದಿಂದ ಸುಗಮ ಸಂಗೀತ, ಕಲಾಕ್ಷೀರ ಸಂಗೀತ ಪ್ರದರ್ಶಕ ಕಲೆಗಳ ಕೇಂದ್ರದ ವಿದ್ವಾನ್ ಸಾಗರ್‌ ಸಿಂಗ್ ಮತ್ತು ತಂಡದಿಂದ ಭರತನಾಟ್ಯದ ನೃತ್ಯವನ್ನು ಪ್ರದರ್ಶಿಸಿದ್ದು, ಅರಮನೆ ಅಂಗಳದಲ್ಲಿ ಸೇರಿದ್ದ ಸಂಗೀತ ಪ್ರಿಯರನ್ನು ಸೆಳೆದಿತ್ತು.

Tags:
error: Content is protected !!