ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಜಗತ್ಪ್ರಸಿದ್ಧ ಮೈಸೂರು ಅರಮನೆಯಲ್ಲಿ ಇಂದಿನಿಂದ ಯದುವಂಶದ ಖಾಸಗಿ ದರ್ಬಾರ್ ಆರಂಭವಾಗಲಿದೆ.
ಇಂದಿನಿಂದ ಸೆಪ್ಟೆಂಬರ್.29ರವರೆಗೆ ಖಾಸಗಿ ದರ್ಬಾರ್ ಜರುಗಲಿದ್ದು, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ರತ್ನಖಚಿತ ಸಿಂಹಾಸನವೇರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.
ಇಂದು ಬೆಳಿಗ್ಗೆ ಚಾಮುಂಡಿತೊಟ್ಟಿಯಲ್ಲಿ ಯದುವೀರ್ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ಅವರಿಗೆ ವಾಣಿವಿಲಾಸ ದೇವರ ಮನೆಯಲ್ಲಿ ಕಂಕಣ ಧಾರಣೆ ಮಾಡಲಾಗಿದೆ.
ಬಳಿಕ ಅರಮನೆಯ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಪಟ್ಟದ ಆನೆ ಹಾಗೂ ಕುದುರೆ, ಹಸು ಸೇರಿದಂತೆ ಕಳಸ ಹೊತ್ತು ಮಹಿಳೆಯರು ಬಂದು ಮಂಗಳವಾದ್ಯದೊಂದಿಗೆ ಸವಾರಿ ತೊಟ್ಟಿಯ ಪೂಜಾ ಕೈಂಕರ್ಯಗಳು ನೆರವೇರಿದವು.
ಬಳಿಕ ಯದುವೀರ್ ಒಡೆಯರ್ ಅವರು ರತ್ನ ಖಚಿತ ಸಿಂಹಾಸನ ಅಲಂಕರಿಸಿದರು. ಸೆಪ್ಟೆಂಬರ್.29ರಂದು ಬೆಳಿಗ್ಗೆ 10.10ರಿಂದ 10.30ರ ಒಳಗೆ ಒಡೆಯರ್ ಅವರು ಸರಸ್ವತಿ ಪೂಜೆ ನೆರವೇರಿಸಲಿದ್ದು, ಅಂದು ರಾತ್ರಿ ಖಾಸಗಿ ದರ್ಬಾರ್ ಕೊನೆಗೊಳ್ಳಲಿದೆ.





