Mysore
23
clear sky

Social Media

ಗುರುವಾರ, 26 ಮಾರ್ಚ್ 2026
Light
Dark

Mysuru dasara | ದಸರಾ ಚಲನಚಿತ್ರೋತ್ಸವ : ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರದಾನ

ಮೈಸೂರು : ಮೈಸೂರು ದಸರಾ ಮಹೋತ್ಸವ – 2025ರ ಹಿನ್ನೆಲೆ ನಗರದ ಮಾಲ್ ಆಫ್ ಮೈಸೂರಿನ ಐನಾಕ್ಸ್ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ದಸರಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಕಿರುಚಿತ್ರಗಳಿಗೆ ಗುರುವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸುತನ್ ನಿರ್ದೇಶನದ ಲಕುಮಿ ಕಿರುಚಿತ್ರಕ್ಕೆ ಪ್ರಥಮ ಬಹುಮಾನ ಹಾಗೂ 20 ಸಾವಿರ ರೂ.ಗಳ ಗೌರವಧನ, ಮಣಿಕಂಠ ನಿರ್ದೇಶನದ ಹಿಂಬಾಲಿಸು ಚಿತ್ರಕ್ಕೆ ಎರಡನೇ ಬಹುಮಾನ ಹಾಗೂ 15 ಸಾವಿರ ರೂ.ಗಳ ಗೌರವಧನ ಮತ್ತು ಶಶಿಕುಮಾರ್ ಡಿ ಎಸ್ ನಿರ್ದೇಶನದ ಹಬ್ಬದ ಹಸಿವು ಚಿತ್ರಕ್ಕೆ ಮೂರನೇ ಬಹುಮಾನ ಹಾಗೂ 10 ಸಾವಿರ ರೂ.ಗಳ ಗೌರವಧನ ನೀಡಲಾಯಿತು. ಅತ್ಯುತ್ತಮ ಛಾಯಾಗ್ರಹಣ ವಿಭಾಗದಲ್ಲಿ ಲಕುಮಿ ಹಾಗೂ ಅತ್ಯುತ್ತಮ ಸಂಕಲನಕಗಾರ ವಿಭಾಗದಲ್ಲಿ ಹಿಂಬಾಲಿಸು ಕಿರುಚಿತ್ರಕ್ಕೆ ಪ್ರಶಸ್ತಿ ದೊರೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಿರುತೆರೆ ನಟಿ ದೀಪಾ ರವಿಶಂಕರ್ ಅವರು ಮಾತನಾಡಿ, ಪ್ರಶಸ್ತಿ ಸಿಗದವರು ಬೇಸರಗೊಳ್ಳಬೇಡಿ, ಕಡಿಮೆ ಸಮಯದಲ್ಲಿ ಒಂದು ಸಂದೇಶ ಸಾರುವ ಕಿರುಚಿತ್ರ ಮಾಡುವುದು ಕಮರ್ಷಿಯಲ್ ಸಿನಿಮಾಗಿಂತ ಕಷ್ಟಕರ ಹಾಗೂ ಇದಕ್ಕೆ ಶ್ರಧ್ದೆ ಬಹಳ ಮುಖ್ಯವಾಗಿರುತ್ತದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಇನ್ನೂ ಹೆಚ್ಚೆಚ್ಚು ಕಿರುಚಿತ್ರಗಳನ್ನು ಮಾಡಿ ಎಂದು ಹೊಸಬರಿಗೆ ಸಲಹೆ ನೀಡಿದರು.

ಈ ವೇಳೆ ಮುಖ್ಯ ಅತಿಥಿಗಳಾದ ಕಿರುತೆರೆ ನಟಿ ದೀಪಾ ರವಿಶಂಕರ್ , ಕಿರುತೆರೆ ನಟ ಅಶ್ವಿನ್ ಕುಮಾರ್ ಹಾಗೂ ಹಿರಿಯ ಛಾಯಾಗ್ರಾಹಕ ಅಶ್ವತ್ ನಾರಾಯಣ ಅವರನ್ನು ಉಪ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಚಲನಚಿತ್ರ ಉಪ ಸಮಿತಿ ಉಪ ಅಧ್ಯಕ್ಷರಾದ ಸಿದ್ಧರಾಜು, ವಿಶೇಷಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ವಿಜಯ್ ಕುಮಾರ್, ತೀರ್ಪುಗಾರರಾದ ಕಾವಾ ಕಾಲೇಜಿನ ಪ್ರಾಧ್ಯಾಪಕರಾದ ಚರಿತಾ, EMMRC ತಂತ್ರಜ್ಞರಾದ ಗೋಪಿನಾಥ್ ಹಾಗೂ ಉಪ ಸಮಿತಿ ಉಪಾಧ್ಯಕ್ಷರು ಮತ್ತು ಸದಸ್ಯರು ಇದ್ದರು.

Tags:
error: Content is protected !!