ಮೈಸೂರು : ದಸರಾ ಮಹೋತ್ಸವದ ಪ್ರಯುಕ್ತ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೆ.೨೭ರಿಂದ ಅ.೨ರವರೆಗೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸೆ.೨೭ರಂದು ಸಂಜೆ ೪ಕ್ಕೆ ವೈಮಾನಿಕ ಪ್ರದರ್ಶನ, ಸೆ.೨೮ ಮತ್ತು ೨೯ರಂದು ಸಂಜೆ ೬ಕ್ಕೆ ಡ್ರೋನ್ ಶೋ, ಅ.೧ರಂದು ಸಂಜೆ ೪ಕ್ಕೆ ವೈಮಾನಿಕ ಪ್ರದರ್ಶನ ಮತ್ತು ಪಂಜಿನ ಕವಾಯತು ಪೂರ್ವಾಭ್ಯಾಸ ಕಾರ್ಯಕ್ರಮ, ಅ.೨ರಂದು ಸಂಜೆ ೬ ಗಂಟೆಗೆ ಪಂಜಿನ ಕವಾಯತು ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.
ಬನ್ನಿಮಂಟಪ ಮೈದಾನದಲ್ಲಿನ ಆಸನಗಳ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ ಕಾರ್ಯಕ್ರಮ ವೀಕ್ಷಣೆಗೆ ಅನುವಾಗುವಂತೆ ಆಯಾ ದಿನಗಳಿಗೆ ಸೀಮಿತವಾಗಿ ಪಾಸ್‌ಗಳನ್ನು ವಿತರಿಸಲಾಗುವುದು.
ಒಳಾಂಗಣಕ್ಕೆ ಪಾಸ್‌ಗಳನ್ನು ಹೊಂದಿರುವವರಿಗೆ ಮಾತ್ರವೇ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಬನ್ನಿಮಂಟಪದ ಮೈದಾನದ ಮಿತ ಸಾಮರ್ಥ್ಯವನ್ನು ಗಮನದಲ್ಲಿರಿಸಿ ಕೊಂಡು ಪಾಸ್ ಇಲ್ಲದವರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.





