ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇಂದು ಕೃಷಿ ಹಾಗೂ ರೈತರನ್ನ ಉತ್ತೇಜಿಸಲು ರೈತ ದಸರಾ ಆಯೋಜನೆ ಮಾಡಲಾಗಿತ್ತು.
ಮೈಸೂರಿನ ಅರಮನೆ ಬಳಿಯಿರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ನಂದಿ ಧ್ವಜ ಪೂಜೆ ನೆರವೇರಿಸಿ ಬಳಿಕ ದೀಪ ಬೆಳಗುವ ಮೂಲಕ ರೈತ ದಸರಾ ಮೆರವಣಿಗೆಗೆ ಚಾಲನೆ ನೀಡಿದರು.
ಇದನ್ನು ಓದಿ : ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ವಿದ್ಯಾರ್ಥಿಗಳಿಂದ ಪಾರಂಪರಿಕ ನಡಿಗೆ
ರೈತ ದಸರಾದಲ್ಲಿ ಹಳ್ಳಿಕಾರ್ ಜೋಡೆತ್ತುಗಳು, ಎತ್ತಿನಗಾಡಿ, ಪುಂಗನೂರು ಹಸು, ಬಂಡೂರು ತಳಿಯ ಕುರಿಗಳು ಕಣ್ಮನ ಸೆಳೆದವು. ವೀರಗಾಸೆ, ಡೊಳ್ಳುಕುಣಿತ, ಪೂಜಾ ಕುಣಿತ, ತಮಟೆ, ಕಂಸಾಳೆ ಸೇರಿದಂತೆ ಹಲವು ಕಲಾತಂಡಗಳು ರೈತ ದಸರಾ ಮೆರವಣಿಗೆಗೆ ಮೆರುಗು ನೀಡಿದವು.
ಕಾರ್ಯಕ್ರಮದಲ್ಲಿ ಸಚಿವ ಕೆ.ವೆಂಕಟೇಶ್, ಶಾಸಕರಾದ ಹರೀಶ್ ಗೌಡ, ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.





