Mysore
19
clear sky

Social Media

ಸೋಮವಾರ, 19 ಜನವರಿ 2026
Light
Dark

ದಸರಾ ವೇಳೆ ಯಾವುದೇ ಅನಾಹುತವಾಗದಂತೆ ನೋಡಿಕೊಳ್ಳಿ : ಡಿಜಿಪಿ ಡಾ.ಎಂ.ಎ.ಸಲೀಂ

ಮೈಸೂರು : ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ದಸರಾ ವೇಳೆ ಯಾವರೀತಿ ಬಂದೋಬಸ್ತ್ ಏರ್ಪಡಿಸಬೇಕು ಎಂಬ ಕುರಿತು ರಾಜ್ಯ ಪೋಲಿಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಅವರು ನಗರದ ಹಿರಿಯ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.

ನಗರದ ನಜರ್‌ಬಾದ್‌ನಲ್ಲಿರುವ ನಗರ ಪೋಲಿಸ್ ಆಯುಕ್ತರ ಕಛೇರಿ ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ ದಸರಾ ಮಹೋತ್ಸವದ ಭದ್ರತೆಗೆ ಕೈಗೊಂಡಿರುವ ಸಿದ್ಧತೆ ಕುರಿತಂತೆ ಅವರು ಎಸಿಪಿ ಹಾಗೂ ಮೇಲ್ಪಟ್ಟ ಪೋಲಿಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಈ ಬಾರಿಯ ದಸರಾ ಸೂಕ್ಷವಾಗಿದ್ದು, ಇಲಾಖೆ ವತಿಯಿಂದ ವ್ಯಾಪಕ ಬಂದೋಬಸ್ತ್ ಏರ್ಪಡಿಸಬೇಕು. ದಸರಾ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತೀವ್ರ ಕಟ್ಟೆಚ್ಚರ ವಹಿಸಬೇಕು. ಈ ಸಂಬಂದ ಆಗಿಂದಾಗ್ಗೆ ಸಭೆಗಳನ್ನು ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರಿನ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಣಿತ, ಬಾಣು ಮುಷ್ತಾಕ್ ಆಯ್ಕೆ ವಿವಾದ, ಮದ್ದೂರಿನಲ್ಲಿ ನಡೆದ ಘಟನೆಗಳ ಬಗ್ಗೆ ನೀವುಗಳು ಗಂಭೀರವಾಗಿ ಆಲೋಚಿಸಬೇಕು. ಈ ಹಿನ್ನೆಲೆಯಲ್ಲಿ ಸೆ.೨೨ ರಿಂದ ಆರಂಭವಾಗುವ ದಸರಾ ನವರಾತ್ರಿ ಉತ್ಸವಕ್ಕೆ ಹೆಚ್ಚಿನ ಭದ್ರತೆ ವಹಿಸಬೇಕು ಎಂದು ಹೇಳಿದರು.

ಸೆ.೨೨ ರಂದು ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ನಡೆಯಲಿರುವ ದಸರಾ ಮಹೋತ್ಸವದ ಉದ್ಘಾಟನೆ ವೇಳೆ ತೀವ್ರ ವಿರೋಧ ಅಥವಾ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವುದರಿಂದ ಅಲ್ಲಿ ಎಸ್ಪಿ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಬೇಕು ಎಂದಿದ್ದಾರೆ.

ಇದೇ ವೇಳೆ ದಸರಾ ಉದ್ಘಾಟಕರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಅವರು ಕಾರ್ಯಕ್ರಮ ಮುಗಿಸಿ ಸುರಕ್ಷಿತವಾಗಿ ತೆರಳುವವರೆಗೆ ಪೊಲೀಸರು ಕಟ್ಟೆಚ್ಚರ ವಹಿಸಬೇಕು ಎಂದು ಖಡಕ್ ಸೂಚನೆ ನಿಡಿದ್ದಾರೆ.

ವಿಜಯದಶಮಿ ಮೆರವಣಿಗೆ ವೇಳೆ ಅರಮನೆ ಆವರಣ, ಸುತ್ತಲಿನ ಪ್ರವೇಶದ್ವಾರಗಳು, ಮೆರವಣಿಗೆ ಸಾಗುವ ರಾಜಮಾರ್ಗ ಹಾಗೂ ಪಂಜಿನ ಕವಾಯಿತು ಪ್ರದರ್ಶನ ನಡೆಯಲಿರುವ ಬನ್ನಿಮಂಟಪದ ಟಾರ್ಚಲೈಟ್ ಪೆರೇಡ್ ಮೈದಾನದಲ್ಲೂ ಕಟ್ಟೆಚ್ಚರ ವಹಿಸಬೇಕು ಎಂದರು.

ಮಾರ್ಗದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ದಸರಾ ವೇಳೆ ದೇಶವಿದೇಶದಿಂದ ಲಕ್ಷಾಂತರ ಮಂದಿ ಸೇರುವುದರಿಂದ ಚಾಮುಂಡಿಬೆಟ್ಟ, ಯುವ ದಸರಾ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ದಸರಾ ವಸ್ತುಪ್ರದರ್ಶನ, ವೈಮಾನಿಕ ಪ್ರದರ್ಶನದಂತಹ ಕಾರ್ಯಕ್ರಮ ನಡೆಯುವ ಸ್ಥಳದಲ್ಲೂ ಮೆಟಲ್ ಡೋರ್ ಡಿಟೆಕ್ಟರ್ ಅಳವಡಿಸಿ, ಪ್ರತಿಯೊಬ್ಬರನ್ನೂ ತಪಾಸಣೆ ನಡೆಸುವಂತೆ ಸೂಚನೆ ನಿಡಿದ್ದಾರೆ.

ಸಭೆಯಲ್ಲಿ ಡಿಸಿಪಿಗಳಾದ ಆರ್.ಎನ್. ಬಿಂದುಮಣಿ, ಕೆ.ಎಸ್.ಸುಂದರ್ ರಾಜ್, ಸಿದ್ಧನಗೌಡ ಪಾಟೀಲ್, ಮೌಂಟೆಂಡ್ ಪೋಲಿಸ್ ಕಮಾಂಡೆಂಟ್ ಎ.ಮಾರುತಿ, ನಗರ ಸಂಚಾರ ವಿಭಾಗದ ಎಂ. ಶಿವಶಂಕರ್, ಅರಮನೆ ಭದ್ರತಾ ವಿಭಾಗದ ಚಂದ್ರಶೇಖರ್ ಸೇರಿದದಂತೆ ಎಲ್ಲಾ ಉಪ ವಿಭಾಗಗಳ ಎಸಿಪಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಡಿಐಜಿ ಡಾ. ಭೋರಲಿಂಗಯ್ಯ, ನಗರ ಪೋಲಿಸ್ ಆಯುಕ್ತರಾದ ಸೀಮಾ ಲಾಟ್ಕರ್ ಹಾಗೂ ಎಸ್ಪಿ ಎನ್.ವಿಷ್ಣುವರ್ಧನ ಅವರು ಪುಷ್ಪಗುಚ್ಛ ನೀಡುವ ಮೂಲಕ ಬರಮಾಡಿಕೊಂಡರು.

Tags:
error: Content is protected !!