Mysore
22
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಸಹಸ್ರಾರು ಪ್ರೇಕ್ಷಕರ ಮನಗೆದ್ದ ಡ್ರೋನ್ ಶೋ ; ಭಾರೀ ಮೆಚ್ಚುಗೆ

ಮೈಸೂರು : ಬಾನಂಗಳದಲ್ಲಿ ಸಹಸ್ರಾರು ಡ್ರೋನ್ ಗಳ ಮೂಲಕ ಅತ್ಯಾಕರ್ಷಕ ಚಿತ್ತಾರ ಬಿಡಿಸಿ ನೋಡುಗರ ಕಣ್ಮನ ಸೆಳೆದಿದ್ದ ಡ್ರೋನ್ ಪ್ರದರ್ಶನ ಎರಡನೇ ದಿನವೂ ಪ್ರೇಕ್ಷಕರನ್ನು ರಂಜಿಸಿತು.

ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2025ದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಆಯೋಜಿಸಿರುವ ಡ್ರೋನ್ ಪ್ರದರ್ಶನಕ್ಕೆ ಪ್ರೇಕ್ಷಕರಿಂದ‌ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾವಿರಾರು ಪ್ರೇಕ್ಷಕರಿಂದ
ಕಿಕ್ಕಿರಿದು ತುಂಬಿದ್ದ ಮೈದಾನದಲ್ಲಿ ‌3000 ಡ್ರೋನ್ ಗಳು ಆಗಸದಲ್ಲಿ ವಿವಿಧ ಕಲಾಕೃತಿಗಳ ಬಣ್ಣಬಣ್ಣದ ಚಿತ್ತಾರಗಳನ್ನು ಬಿಡಿಸುವ ಮೂಲಕ ಎಲ್ಲರನ್ನು ರೋಮಾಂಚನಗೊಳಿಸಿತು.

ಆಗಸದಲ್ಲಿ ಡ್ರೋನ್ ಗಳ ಮೆರಗು
ಏಕಕಾಲದಲ್ಲಿ ಆಗಸಕ್ಕೆ ಲಗ್ಗೆ ಹಾಕಿದ ಡ್ರೋನ್ ಗಳು ಬಣ್ಣಬಣ್ಣದ ದೀಪಗಳಿಂದ ಮಿನುಗುತ್ತಾ ಆಕರ್ಷಕ ಕಲಾಕೃತಿಗಳನ್ನು ಸೃಷ್ಟಿಸಿದವು. ಸೌರಮಂಡಲ, ವಿಶ್ವಭೂಪಟ, ದೇಶದ ಹೆಮ್ಮೆಯ ಸೈನಿಕ, ನವಿಲು, ರಾಷ್ಟ್ರೀಯ ಪ್ರಾಣಿ ಹುಲಿ, ಡಾಲ್ಫಿನ್, ಈಗಲ್, ಸರ್ಪದ ಮೇಲೆ ಶ್ರೀಕೃಷ್ಣ ನೃತ್ಯ ಮಾಡುವುದು, ಕಾವೇರಿ ಮಾತೆ, ಕರ್ನಾಟಕ ಭೂಪಟದೊಂದಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರದೊಂದಿಗೆ ಪಂಚ ಗ್ಯಾರಂಟಿ ಯೋಜನೆಗಳಿಂದ ಕೂಡಿದ್ದ ಕರ್ನಾಟಕ ಭೂಪಟ‌, ಅಂಬಾರಿ ಆನೆ, ನಾಡದೇವತೆ ಚಾಮುಂಡೇಶ್ವರಿ ಕಲಾಕೃತಿಗಳು ನೋಡುಗರಿಗೆ ಅದ್ಭುತ ಮನರಂಜನೆ ನೀಡಿದವು.

ಸಂಗೀತಕ್ಕೆ ತಲೆದೂಗಿದ ಪ್ರೇಕ್ಷಕ
ಐಗಿರಿ ನಂದಿನಿ ಗೀತೆಯೊಂದಿಗೆ ಸಂಗೀತ ಸಂಜೆಗೆ ಗಾಯಕಿ ದಿವ್ಯ ರಾಮಚಂದ್ರ ಅವರು ಅದ್ಭುತ ಆರಂಭ ನೀಡಿದರು. ಗಿಲ್ಲಕ್ಕೋ ಶಿವ ಗಿಲ್ಲಕ್ಕೋ, ಪಸಂದಾಗವ್ನೆ ಇತರ ಹಾಡುಗಳನ್ನು ಹಾಡಿ ಎಲ್ಲರನ್ನೂ ರಂಜಿಸಿದರೆ. ಬಳಿಕ ಮೈಸೂರಿನ ಶ್ರೀಹರ್ಷ ಅವರು ಬೊಂಬೆ ಹೇಳುತೈತೆ, ಶ್ರೀರಾಮನ ಕುರಿತು ಗೀತೆಗೆ ಮೈದಾನದಲ್ಲಿ ಸೇರಿದ್ದ ಜನರೆಲ್ಲಾ ದನಿಗೂಡಿಸಿದರು. ಅಪ್ಪ ಐ ಲವ್ ಯೂ ಹಾಡಿನೊಂದಿಗೆ ವೇದಿಕೆಗೆ ಬಂದ ಖ್ಯಾತ ಗಾಯಕಿ ಅನುರಾಧ ಭಟ್, ಕಣ್ಣು ಹೊಡೆಯಾಕ್ಕಾ ಹಾಡು ಹಾಡಿ ಮನರಂಜಿಸಿದರು. ಇವರಿಗೆ ದನಿಯಾದ ಗಾಯಕ ಜಸ್ಕರಣ್ ಸಿಂಗ್, ದ್ವಾಪರ ದಾಟುತ, ನಿನ್ನ ಜೊತೆ ನನ್ನ ಕಥೆ ಹಾಡಿಗೆ ದನಿಗೂಡಿಸಿದರು.

ಇದನ್ನೂ ಓದಿ:-61 ಲಕ್ಷ ರೂ. ಮೌಲ್ಯದ ನಗದು, ಚಿನ್ನಾಭರಣ ಲೂಟಿ : ಮನೆ ಮಾಲೀಕರು ದಸರಾ ನೋಡಲು ಮೈಸೂರಿಗೆ ತೆರಳಿದ್ದಾಗ ಕಳ್ಳರ ಕೈಚಳಕ

ಈ ಸಂದರ್ಭದಲ್ಲಿ ರೆಡ್ ಎಫ್.ಎಂ. ಆರ್ ಜೆ ರಶ್ಮಿ ಅವರು ಉತ್ತಮವಾಗಿ ಕಾರ್ಯಕ್ರಮದ ನಿರೂಪಣೆ ಮಾಡಿದರು.

ಇದೇ ವೇಳೆ ಡ್ರೋನ್ ಪ್ರದರ್ಶನಕ್ಕೆ ಸಚಿವರಾದ ಕೆ. ವೆಂಕಟೇಶ್, ಶಾಸಕರು ಹಾಗೂ ಸೆಸ್ಕ್ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ, ಶಾಸಕ ಡಿ. ರವಿಶಂಕರ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ದಸರಾ ದೀಪಾಲಂಕಾರ ಸಮಿತಿ ಅಧ್ಯಕ್ಷ (ಅಧಿಕಾರೇತರ) ರಾಘವೇಂದ್ರ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು, ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್, ಅಧೀಕ್ಷಕ ಇಂಜಿನಿಯರ್ ಸುನೀಲ್ ಸೇರಿದಂತೆ ಹಲವರಿದ್ದರು.

Tags:
error: Content is protected !!