ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಸಂಭ್ರಮದ ಮಧ್ಯೆ ಮಳೆರಾಯ ಆಗಮಿಸಿದ್ದಾನೆ.
ಹೌದು ಮೈಸೂರಿನಲ್ಲಿ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು. ಆದರೆ ಮಧ್ಯಾಹ್ನದ ವೇಳೆ ಜಿಟಿ ಜಿಟಿ ಮಳೆ ಆರಂಭವಾಗಿದ್ದು, ವರುಣನ ಆಗಮನದ ನಡುವೆಯೂ ಜನತೆ ದಸರಾವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಜಿಟಿ ಜಿಟಿ ಮಳೆ ಬರುತ್ತಿರುವ ಪರಿಣಾಮ ನಗರದಲ್ಲಿ ಚಳಿಯ ವಾತಾವರಣ ನಿರ್ಮಾಣವಾಗಿದೆ. ಆದರೆ ಇದ್ಯಾವುದನ್ನು ಲೆಕ್ಕಿಸದ ಜನತೆ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲೇಬೇಕೆಂದು ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ್ದಾರೆ.
ಸದ್ಯ ಜಿಟಿ ಜಿಟಿ ಮಳೆಯ ನಡುವೆಯೂ ಈ ಬಾರಿ 51 ಸ್ತಬ್ಧಚಿತ್ರಗಳು ಮೆರವಣಿಗೆಗಳು ಸಾಗುತ್ತಿದ್ದು, ಟ್ಯಾಬ್ಲೋಗಳ ಮುಂದೆ ಜಾನಪದ ಕಲಾತಂಡಗಳು ಮೆರಗು ನೀಡುತ್ತಿವೆ.
ರಸ್ತೆಗಳಲ್ಲಿ ಕಿಕ್ಕಿರಿದು ಸೇರಿರುವ ಜನತೆ ಸದ್ಯ ಸ್ತಬ್ಧಚಿತ್ರಗಳನ್ನು ನೋಡಿ ಖುಷಿಪಡುತ್ತಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲಿದ್ದಾರೆ.