ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಹಲವು ಜಾನಪದ ಕಲಾತಂಡಗಳು ಮೆರಗು ನೀಡಲಿವೆ.
ತಮಟೆ, ನಗಾರಿ, ಡೊಳ್ಳು, ಜಗ್ಗಲಗೆ, ಕಂಸಾಳೆ, ಬುಡಬುಡಿಕೆ, ಕಹಳೆ ನಾದ, ಡೊಳ್ಳು ಕುಣಿತ, ಮಕ್ಕಳ ಕೋಲಾಟ ಸೇರಿದಂತೆ ಅನೇಕ ಕಲಾತಂಡಗಳು ಮೆರವಣಿಗೆಯಲ್ಲಿ ತಮ್ಮ ಮೆರುಗನ್ನು ನೀಡಲಿವೆ.
ಅರಮನೆ ಆವರಣದಲ್ಲಿ ಆರಂಭಗೊಳ್ಳಲಿರುವ ಜಾನಪದ ಕುಣಿತಗಳು ಗ್ರಾಮೀಣ ಸೊಗಡು, ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸಲಿವೆ. ಜಂಬೂಸವಾರಿಯಲ್ಲಿ ಸ್ತಬ್ಧಚಿತ್ರಗಳ ನಡುವೆ ಈ ಕಲಾತಂಡಗಳು ಸಿಕ್ಕ ಅವಕಾಶದಲ್ಲೇ ನೋಡುಗರಿಗೆ ಸಂತೋಷ ಉಂಟುಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದವು.
ನಂದೀಧ್ವಜ ಹೊತ್ತು ಹೊರಟ ಕಲಾತಂಡದ ಹಿಂದೆ ವೀರಭದ್ರ ಕುಣಿತ ತಂಡಗಳ ಕಲಾವಿದರ ಅಬ್ಬರ, ಆರ್ಭಟ, ಕೆಂಗಣ್ಣುಗಳೊಂದಿಗೆ ಖಡ್ಗ ಝಳಪಿಸುತ್ತಾ ವಾದ್ಯಗಳ ನಾದಕ್ಕೆ ಹೆಜ್ಜೆ ಹಾಕುತ್ತಿದ್ದಂತೆ ಜನರಲ್ಲಿ ಆಲಸ್ಯ ಮಾಯವಾಗಲಿದೆ.
ಇದೆಲ್ಲದರ ಜೊತೆಗೆ ಕಂಗಿಲು ನೃತ್ಯ, ಕೋಲಾಟ, ಚಂಡೆಮೇಳ, ಪೂಜಾ ಕುಣಿತ, ಪಟ ಕುಣಿತ, ಲಂಬಾಣಿ ನೃತ್ಯ, ಸಿದ್ದಿ ಡಮಾಯಿ ನೃತ್ಯ, ಗಾರುಡಿ ಗೊಂಬೆ, ಮರಗಾಲು ಕುಣಿತ, ಕೀಲುಕುದುರೆ ಇತ್ಯಾದಿ ತಂಡಗಳು ನೋಡುಗರ ಮನದಾಳದಲ್ಲಿ ಅಚ್ಚೊತ್ತಲಿವೆ.