ಮೈಸೂರು : ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ನ.೨೫ರಿಂದ ೨೦೨೬ರ ಮಾ.೨೫ ರವರೆಗೆ ರಾಜ್ಯಾದ್ಯಂತ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‌ಎಸ್) ಜಿಲ್ಲಾ ಘಟಕದ ವತಿಯಿಂದ ನಡೆಯಲಿರುವ ಸಹಿ ಸಂಗ್ರಹ ಅಭಿಯಾನಕ್ಕೆ ನಗರದ ಚಿಕ್ಕ ಗಡಿಯಾರದ ಬಳಿ ಚಾಲನೆ ನೀಡಲಾಯಿತು.
ಆಂದೋಲನ ಪತ್ರಕ್ಕೆ ಸಹಿ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧ್ಯಕ್ಷೆ ನಳಿನ, ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸಮೂಹ ಮಾಧ್ಯಮಗಳಲ್ಲಿ ಅಶ್ಲೀಲತೆ ಮತ್ತು ಕ್ರೌರ್ಯತೆಯನ್ನು ನಿಷೇಧ ಮಾಡಬೇಕು. ಮಹಿಳೆಯರಿಗೆ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗವನ್ನು ಖಾತರಿಪಡಿಸಬೇಕು. ಈ ಬೇಡಿಕೆಗಳನ್ನು ಈಡೇರುವವರೆಗೂ ಮಹಿಳೆಯರು, ಜನಸಾಮಾನ್ಯರು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಎಂದರು.
ಇದನ್ನೂ ಓದಿ:-ಬೆಂಗಳೂಲ್ಲಿ 300 ಎಕರೆ ಜಮೀನು ಖರೀದಿಸಿದ್ದ ಧರ್ಮೆಂದ್ರ
ಜಿಲ್ಲಾ ಉಪಾಧ್ಯಕ್ಷೆ ಜಿ.ಎಸ್.ಸೀಮಾ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮಹಿಳೆಯರ ಕುರಿತು ಯಾವುದೇ ಕಾಳಜಿ ಇಲ್ಲ. ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿಯಾದಂತೆ ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ೮೦ ಸಾವಿರ ಬಾಲ ಗರ್ಭಿಣಿಯರು ಕಂಡು ಬಂದಿರುವುದು, ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಮಕ್ಕಳ ಅಸಹಜ ಸಾವುಗಳು, ಹೆಣ್ಣು ಮಕ್ಕಳ ಕಳ್ಳ ಸಾಗಾಣಿಕೆ , ಅಶ್ಲೀಲ ಸಿನಿಮಾ -ಸಾಹಿತ್ಯಗಳಿಗೆ ಕಡಿವಾಣ ಹಾಕದೆ ಇರುವುದು, ಮದ್ಯದ ಅಂಗಡಿಗಳನ್ನು ನಿಷೇಽಸುವ ಬದಲು, ಪರವಾನಗಿಯನ್ನು ಕೊಡುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ರಂಗಕರ್ಮಿ ಪ್ರಸನ್ನ, ಹಿರಿಯ ರಂಗಕಲಾವಿದೆ ರಾಮೇಶ್ವರಿ ವರ್ಮ, ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ, ಲೇಖಕಿ ಸುನಂದಮ್ಮ ಅವರನ್ನು ನಿಯೋಗವೊಂದು ಭೇಟಿ ಮಾಡಿದ್ದು, ಪತ್ರಕ್ಕೆ ಸಹಿ ಹಾಕುವುದರ ಮೂಲಕ ಈ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಕಚೇರಿ ಕಾರ್ಯದರ್ಶಿ ಉ.ಪುಷ್ಪ, ಜಿಲ್ಲಾ ಕಾರ್ಯದರ್ಶಿಗಳಾದ ಆಸಿಯಾ ಬೇಗಂ, ಸದಸ್ಯರಾದ ಸಿಂಧು ಗೌರಿ, ಪದ್ಮ, ಗಾಯತ್ರಿ, ತುಳಸಿ , ಸುಮಾ, ಇನ್ನಿತರರು ಹಾಜರಿದ್ದರು.





