ಮೈಸೂರು: ವಾಲ್ಮೀಕಿ ನಿಗಮದ ಹಗರಣವನ್ನು ಖಂಡಿಸಿ ಸೆ.17 ರಿಂದ ಪಾದಯಾತ್ರೆಗೆ ನಿರ್ಧರಿಸಿದ್ದೇವೆ. ಪಕ್ಷದ ನೇತಾರ, ಬಿಜೆಪಿ ಜನಪ್ರಿಯ ನಾಯಕರಾದ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಾವು ಬೆಳಗಾವಿಯಲ್ಲಿ ನಡೆಸಿರುವುದು ಬಿಜೆಪಿ ಅತೃಪ್ತರ ಅಥವಾ ಬಂಡಾಯಗಾರರ ಸಭೆಯಲ್ಲಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಇಂದು ನಗರದಲ್ಲಿ ಪರ್ತಕರ್ತರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ನಾವು ಮೈಸೂರು ಚಲೋ ಪಾದಯಾತ್ರೆ ಅನುಭವವನ್ನು ಹಂಚಿಕೊಂಡಿದ್ದೇವೆ.ವಾಲ್ಮೀಕಿ ಹಗರಣದ ವಿರುದ್ದ ಸರಿಯಾದ ಹೋರಾಟ ನಡೆದರೆ ಸಿಎಂ ಕುರ್ಚಿ ಅಲ್ಲಾಡುತ್ತೆ. ಯತ್ನಳ್ ಅವರಂಥ ದೊಡ್ಡ ನಾಯಕ ಕರೆದ ಕಾರಣ ನಾನು ಸಭೆಗೆ ಹೋಗಿದ್ದೆ ಎಂದು ಹೇಳಿದರು.
ನಮ್ಮ ಪಾದಯಾತ್ರೆಗೆ ಹೈಕಮಾಂಡ್ ಅನುಮತಿ ಕೊಡುತ್ತದೆ. ಈ ಪಾದಯಾತ್ರೆ ಯಾರ ಮೇಲಾಟದ್ದು ಅಲ್ಲ, ಅಥವಾ ಯಾರ ನಾಯಕತ್ವ ಪ್ರದರ್ಶನವೂ ಅಲ್ಲ. ಈ ಪಾದಯಾತ್ರೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಎಲ್ಲರನ್ನೂ ಆಹ್ವಾನಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಯಾರನ್ನೋ ಓಲೈಸಲು ಅಥವಾ ಮೆಚ್ಚಿಸಲು ನಾನು ರಾಜಕಾರಣ ಮಾಡುವುದಿಲ್ಲ. ಯಾರ ಮನೆಯ ಬಾಗಿಲನ್ನೂ ತಟ್ಟುವುದಿಲ್ಲ. ನನಗೆ ಟಿಕೆಟ್ ನೀಡಿದ್ದು ಬಿಜೆಪಿಯಲ್ಲ, ಆರ್‌ಎಸ್‌ಎಸ್. ಕ್ಷೇತ್ರ, ಜಾತಿಯಿಂದಾಜೆಯ ಜನಪ್ರಿಯತೆಯುಳ್ಳ ಯತ್ನಾಳ್ ಅಂಥವರಲ್ಲಿ ನಾನೂ ಒಬ್ಬ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಕೇಂದ್ರಕ್ಕೆ ಹೋಗಬೇಡಿ, ರಾಜ್ಯದಲ್ಲೇ ಇರಿ ಎಂಬ ಸಂದೇಶ ವರಿಷ್ಠರಿಂದ ಸಿಕ್ಕಿದೆ. ಹೀಗಾಗಿ, ಇಲ್ಲೇ ಇದ್ದೇನೆ. ನಾನು ಅನ್ಯಾಯದ ವಿರುದ್ಧ ಮಾತ್ರ ರೆಬಲ್ ಹೊರತು ಪಕ್ಷದ ವಿರುದ್ಧವಲ್ಲ. ಬಿಜೆಪಿಯ ದೊಡ್ಡ ದೊಡ್ಡ ನಾಯಕರಿಗಿಂತಲೂ ನಾನು ಸೀನಿಯರ್. ಏಕೆಂದರೆ ನನ್ನಪ್ಪ ಆರ್‌ಎಸ್‌ಎಸ್ ನಲ್ಲಿದ್ದರು ಎಂದಿದ್ದಾರೆ.
ಬಿ.ಎಸ್ ಯಡಿಯೂರಪ್ಪ ಅಂಥವರು ನೇಪಥ್ಯಕ್ಕೆ ಸರಿಯುತ್ತಿರುವ ಕಾರಣ ಪಕ್ಷಕ್ಕೆ ನನ್ನಂತಹ ಯಂಗ್ ಬ್ಲಡ್ ಬರಬೇಕಿದೆ ಹೀಗಾಗಿ ನನ್ನನ್ನು ರಾಜ್ಯದಲ್ಲೇ ಉಳಿಸಿದ್ದಾರೆ. ಮೈಸೂರು ನನಗೆ ನೆಲೆ ಹಾಗೂ ಪ್ರೀತಿ ಕೊಟ್ಟಿದೆ. ಆದ್ದರಿಂದ ಮೈಸೂರಿನಲ್ಲೆ ಇರುತ್ತೇನೆ ಎಂದು ಹೇಳಿದರು.