ಮೈಸೂರು: ನಗರದ ಒಂಟಿಕೊಪ್ಪಲಿನಲ್ಲಿ ಊರ ಹಬ್ಬ ಹಾಗೂ ಮಾರಮ್ಮ ಜಾತ್ರೆ ಇಂದು ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಹಬ್ಬದ ಅಂಗವಾಗಿ ಗ್ರಾಮದೇವತೆ ಶ್ರೀ ಮಾರಮ್ಮ ದೇವಸ್ಥಾನವನ್ನು ತಳಿರು-ತೋರಣ, ಹೂ ಹಾಗೂ ರಂಗೋಲಿಗಳಿಂದ ಅಲಂಕರಿಸಲಾಗಿತ್ತು. ಇಂದು ಮುಂಜಾನೆಯೇ ಮಾರಮ್ಮನಿಗೆ ಪುಣ್ಯಾಹಃ ಹಾಗೂ ವಿವಿಧ ಪೂಜಾ ಕಾರ್ಯಗಳು ನಡೆದವು. ಆಂಜನೇಯ ಸ್ವಾಮಿಗೆ ಸಂಜೆ ಬೆಲ್ಲದ ಆರತಿ, ತಂಬಿಟ್ಟಿನ ಪೂಜೆಯನ್ನು ಸಲ್ಲಿಸಲಾಯಿತು.
ಮಹಿಳೆಯರು ಹೊಂಬಾಳೆ, ಕನಕಾಂಬರ, ಮಲ್ಲಿಗೆ, ಗುಲಾಬಿ ಹೂಗಳಿಂದ ಸಿಂಗಾರ ಮಾಡಿದ ಆರತಿ, ತಂಬಿಟ್ಟು ಹೊತ್ತು ಸಾಗಿದರು. ಹರಕೆ ಹೊತ್ತವರು ದೇವಾಲಯದ ಮುಂಭಾಗ ಕೊಂಡ ಹಾಯ್ದು ದೇವಿಗೆ ಆರತಿ ಬೆಳಗಿದರು. ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಮನೆಗಳ ಮುಂದೆ ವಿದ್ಯುತ್ ದೀಪಾ ಲಂಕಾರ ಮಾಡಲಾಗಿತ್ತು. ನೆಂಟರಿಷ್ಟರು ಸಹ ಹಬ್ಬದಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆ ತೆರಳುವ ರಸ್ತೆಗಳನ್ನು ತಳಿರು-ತೋರಣ, ವಿದ್ಯುತ್ ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು. ಮಂಗಳ ವಾದ್ಯ, ತಮಟೆ, ನಗಾರಿ ಮತ್ತಿತರ ಕುಣಿತಗಳು ಗ್ರಾಮಸ್ಥರನ್ನು ಆಕರ್ಷಿಸಿದವು. ಯುವಕರು, ಪುಟಾಣಿಗಳ ನರ್ತನ, ಖುಷಿಯ ಹೊನಲು, ಊರ ಹಬ್ಬ ಹಾಗೂ ಮಾರಮ್ಮ ಜಾತ್ರೆಯ ಸಂಭ್ರಮವನ್ನು ಹೆಚ್ಚಿಸಿತು. ಈ ಊರ ಹಬ್ಬವನ್ನು ಎಲ್ಲಾ ಸಮುದಾಯದವರು ಒಟ್ಟಾಗಿ ಸೇರಿ ಆಚರಿಸಿದ್ದು ವಿಶೇಷವಾಗಿತ್ತು.