ಮೈಸೂರು : ಅರಣ್ಯ ಇಲಾಖೆ ಬೇಜವಾಬ್ದಾರಿಯಿಂದ ವನ್ಯಪ್ರಾಣಿಗಳು, ಕಾಡಿನಿಂದ ಹೊರಬರುತ್ತಿವೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ದೂರಿದರು.
ನಗರದ ಹಾರ್ಡಿಂಜ್ ವೃತ್ತದಲ್ಲಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ ಅವರು, ಬೆಳಗಾವಿಯ ರಾಣಿ ಚೆನ್ಮಮ್ಮ ಕಿರು ಮೃಗಾಲಯ ದಲ್ಲಿ ೨೮ ಕೃಷ್ಣ ಮೃಗಗಳ ಸಾವು ಹಾಗೂ ಮೈಸೂರಿನ ಸರಗೂರು ತಾಲ್ಲೂಕಿನಲ್ಲಿ ಹುಲಿ ದಾಳಿಯಿಂದ ಮೂವರ ಸಾವಿಗೆ ಅರಣ್ಯ ಇಲಾಖೆ ಬೇಜವಾಬ್ದಾರಿ ಕಾರಣವೆಂದರು.
ಅರಣ್ಯ ಇಲಾಖೆಯವರ ಬೇಜವಾಬ್ದಾರಿಯಿಂದ ಮೈಸೂರಿನಲ್ಲಿ ಹುಲಿ ಮತ್ತು ಮರಿಗಳು ಸಾವಾಗಿದೆ. ಅಲ್ಲದೇ, ಕಾಡಿನಿಂದ ಕಾಡಂಚಿನ ಪ್ರದೇಶಕ್ಕೆ ಬಂದು ಮೂವರನ್ನು ಹುಲಿಗಳು ಕೊಂದಿವೆ. ಇತ್ತೀಚೆಗೆ ಕಾಡಿನಲ್ಲಿ ಕಾರು ,ಕಾರಿನಲ್ಲಿ ಗನ್ ಸಿಕ್ಕಿದೆ. ಇಷ್ಟೊಂದು ಅವಘಡಗಳು ನಡೆಯುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಪ್ರಾಣಿಗಳು ಕಾಡಿನಿಂದ ಆಚೆ ಬಾರದಂತೆ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿ: ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಮೂವರು ಮಾವೋವಾದಿಗಳು ಬಲಿ
ಪ್ರತಿಭಟನೆಯಲ್ಲಿ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ಶಿವಶಂಕರ್, ಪಾರ್ಥಸಾರಥಿ, ತೇಜಸ್ ಲೋಕೇಶ್ ಗೌಡ ಮತ್ತಿತರರು ಪಾಲ್ಗೊಂಡಿದ್ದರು.
೨೦೨೮ಕ್ಕೂ ಸಿದ್ದರಾಮಯ್ಯ ಅವರೇ ಬೇಕು :
ನವೆಂಬರ್ ಕ್ರಾಂತಿ ಎಂಬುದನ್ನು ಕೇಳಬಹುದು, ಆದರೆ ಅದು ಆಗುವುದಿಲ್ಲ. ಸಿದ್ದರಾಮಯ್ಯ ಬಹಳ ಬುದ್ದಿವಂತ ವ್ಯಕ್ತಿ, ಅವರನ್ನು ಸಿಎಂ ಸ್ಥಾನದಿಂದ ತೆಗೆದರೆ ಮಾತ್ರ ಕ್ರಾಂತಿ, ಹೋರಾಟ,ದಾಳಿಯಾಗಲಿದೆ. ಇಲ್ಲವಾದಲ್ಲಿ ಇದ್ಯಾವುದು ಆಗುವುದಿಲ್ಲ. ಮುಂದಿನ ಚುನಾವಣೆಗೂ ಸಿದ್ದರಾಮಯ್ಯ ಬೇಕು, ಇವರಿಗೆ ಸರಿಸಮನಾದ ಜನ ನಾಯಕರು ಕಾಂಗ್ರೆಸ್, ಬಿಜೆಪಿ, ಜಾ.ದಳ ಪಕ್ಷಗಳಲ್ಲಿ ಇಲ್ಲ. ಸಿದ್ದರಾಮಯ್ಯ ಅವರನ್ನು ತೆಗೆಯುವ ಪ್ರಶ್ನೆಯೇ ಇಲ್ಲ. ಇವರು ಭದ್ರವಾಗಿ ಇರುತ್ತಾರೆ, ೨೦೨೮ರ ಚುನಾವಣೆಗೆ ಅವರೇ ನೇತೃತ್ವವಹಿಸಲಿ ಎಂದರು.





