ಮೈಸೂರು : ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ನಿಷೇಧಿಸಬೇಕೆಂದು ಆಗ್ರಹಿಸಿ ಮೈಸೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ನಗರದ ಹಾರ್ಡಿಂಗ್ ವೃತ್ತದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ವಾಟಾಳ್ ನಾಗರಾಜ್ ಅವರು ತಮಟೆ ಹೊಡೆಯುತ್ತಾ, ಘೋಷಣೆಗಳನ್ನು ಕೂಗುತ್ತಾ ಎಂಇಎಸ್ ಬ್ಯಾನ್ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯ ವೇಳೆ ಎಂಇಎಸ್ ವಿರುದ್ಧದ ಪೋಸ್ಟರ್‌ಗಳಿಗೆ ಬೆಂಕಿ ಹಚ್ಚಲು ವಾಟಾಳ್ ನಾಗರಾಜ್ ಮುಂದಾದಾಗ, ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಪೋಸ್ಟರ್‌ಗಳನ್ನು ಕಿತ್ತುಕೊಂಡರು. ಇದರಿಂದ ವಾಟಾಳ್ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ವಾಗ್ವಾದದ ನಡುವೆಯೇ ಆಕ್ರೋಶಗೊಂಡ ವಾಟಾಳ್ ಅವರು ಪೋಸ್ಟರ್ ಹರಿದು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, “ಮೈಸೂರಿನಲ್ಲಿ ಡ್ರಗ್ಸ್ ಪತ್ತೆಹಚ್ಚಲು ಮಹಾರಾಷ್ಟ್ರ ಪೊಲೀಸರನ್ನೇ ಕರೆಸಿಕೊಳ್ಳುವ ಸ್ಥಿತಿ ಬಂದಿದೆ. ಇದು ರಾಜ್ಯ ಸರ್ಕಾರದ ವೈಫಲ್ಯ” ಎಂದು ವಾಗ್ದಾಳಿ ನಡೆಸಿದರು.
ಇನ್ನೂ, “ಎಂಇಎಸ್ ಸಂಘಟನೆಯನ್ನು ತಕ್ಷಣವೇ ನಿಷೇಧಿಸಬೇಕು. ಇಲ್ಲವಾದರೆ ಜನವರಿ.15ರಂದು ಬೆಳಗಾವಿಗೆ ಮುತ್ತಿಗೆ ಹಾಕಲಾಗುವುದು. ಎಂಇಎಸ್ ಕಚೇರಿಗಳಿಗೆ ನುಗ್ಗುತ್ತೇವೆ. ರಾಜ್ಯಾದ್ಯಂತ ಕನ್ನಡ ಪರ ಹೋರಾಟ ತೀವ್ರಗೊಳಿಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.





