ಮೈಸೂರು : ನಗರದಲ್ಲಿ ಓವರ್ ಹೆಡ್ (ಮೇಲ್ಬಾಗದ) ವಿದ್ಯುತ್ ಮಾರ್ಗವನ್ನು ತೆರವು ಮಾಡಿ ವಿದೇಶಿ ಮಾದರಿಯಲ್ಲಿ ಭೂಗತಕೇಬಲ್‌ಗಳಾಗಿ ಪರಿವರ್ತಿಸುವ 408 ಕೋಟಿ ರೂ. ವೆಚ್ಚದ ಯೋಜನೆಯನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಅನುಷ್ಠಾನಗೊಳಿಸುತ್ತಿದೆ.
ವಿದ್ಯುತ್ ವ್ಯತ್ಯಯ ಹಾಗೂ ವಿದ್ಯುತ್ ಅವಘಡಗಳನ್ನು ತಪ್ಪಿಸುವ ಉದ್ದೇಶದಿಂದ ಸೆಸ್ಕ್ ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ಈ ಮೂಲಕ ಮೈಸೂರು ನಗರದಾದ್ಯಂತ ಸುರಕ್ಷಿತ ಹಾಗೂ ಹೆಚ್ಚು ವಿಶ್ವಾಸಾರ್ಹ ವಿದ್ಯುತ್ ಸರಬರಾಜು ಖಚಿತಪಡಿಸಿಕೊಳ್ಳಲು ಭೂಗತ ಕೇಬಲ್ ಅಳವಡಿಸಲಾಗುತ್ತಿದೆ.
ಇದನ್ನೂ ಓದಿ:-ಮೈ-ಬೆಂ ಹೆದ್ದಾರಿ ಅಪಘಾತ | 2 ವರ್ಷದಲ್ಲಿ 1,674 ಅಪಘಾತ, 215ಮಂದಿ ಸಾವು
ಮೈಸೂರು ನಗರದ ನಾಲ್ಕು ಉಪ ವಿಭಾಗಗಳಲ್ಲಿ 408.94 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಮೂಲಕ 1,100 ಕಿ.ಮೀ.ವರೆಗೆ ಭೂಗತ ಕೇಬಲ್ ಅಳವಡಿಸಲಾಗುತ್ತಿದೆ. ಇದರಿಂದ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಹಾಗೂ ತಾಂತ್ರಿಕ ದೋಷಗಳಿಂದ ಉಂಟಾಗುವ ವಿದ್ಯುತ್ ಅಡಚಣೆ ಗಳನ್ನು ಗಮನಾರ್ಹ ವಾಗಿ ಕಡಿಮೆ ಮಾಡಬಹುದು.
ಮೈಸೂರು ನಗರದ ವಿವಿ ಮೊಹಲ್ಲಾ ವಿಭಾಗ, ಆರ್.ಕೆ.ನಗರ ಉಪ ವಿಭಾಗ, ಎನ್.ಆರ್.ವಿಭಾಗ, ಚಾಮುಂಡಿಪುರಂ ಮತ್ತು ಜ್ಯೋತಿನಗರ ಉಪ ವಿಭಾಗಗಳಲ್ಲಿ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಲಾಗುತ್ತಿದೆ.





