ಮೈಸೂರು: ಇಲ್ಲಿನ ಉದಯಗಿರಿ ಪೊಲೀಸ್ ಠಾಣೆಯ ಮುಂದೆ ನಡೆದಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಿತ ಪೋಸ್ಟ್ ಹಾಕಿದ್ದ ಆರೋಪಿ ಸತೀಶ್‌ಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಆರೋಪಿ ಸತೀಶ್‌ಗೆ ಮೈಸೂರು ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. 2ನೇ ಅಪರ ಸಿವಿಲ್ ನ್ಯಾಯಾಧೀಶರು ಈ ಆದೇಶ ಪ್ರಕಟಿಸಿದ್ದಾರೆ. ಆರೋಪಿ ಪರ ವಕೀಲ ಹ.ಮಾ.ಭಾಸ್ಕರ್ ವಾದ ಮಂಡಿಸಿದ್ದರು.
ಇದೇ ಫೆಬ್ರವರಿ.10ರಂದು ಅವಹೇಳನಕಾರಿ ಪೋಸ್ಟ್ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಅನ್ಯ ಕೋಮಿನ ಯುವಕರ ಗುಂಪು ಕಲ್ಲು ತೂರಾಟ ನಡೆಸಿತ್ತು. ಈ ದಾಳಿಯಲ್ಲಿ ಇನ್ಸ್‌ಪೆಕ್ಟರ್ ಸೇರಿದಂತೆ 14 ಮಂದಿ ಪೊಲೀಸರಿಗೆ ಗಂಭೀರ ಗಾಯಗಳಾಗಿತ್ತು. 10ಕ್ಕೂ ಹೆಚ್ಚು ಪೊಲೀಸ್ ವಾಹನಗಳು ಜಖಂ ಆಗಿದ್ದವು. ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದ ಪೊಲೀಸರು 1000ಕ್ಕೂ ಹೆಚ್ಚು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಅವಹೇಳನಕಾರಿ ಪೋಸ್ಟ್ ಹಾಕಿದ್ದ ಸತೀಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆತನ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ ಈ ಬಗ್ಗೆ ಪೊಲೀಸ್ ಅಧಿಕೃತ ಫೇಸ್‌ಬುಕ್‌ನಲ್ಲಿ ಮಾಹಿತಿಯನ್ನು ಮೈಸೂರು ನಗರ ಪೊಲೀಸರು ಹಂಚಿಕೊಂಡಿದ್ದರು.