Mysore
22
haze

Social Media

ಶನಿವಾರ, 13 ಡಿಸೆಂಬರ್ 2025
Light
Dark

ಮೈಸೂರಲ್ಲಿ ಎರಡು ದಿನ ಮಾಗಿ ಸಂಭ್ರಮ : ಅವರೆಕಾಯಿ ಸೊಗಡು ಜೋರು…

ಮೈಸೂರು : ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗ್ರಾಹಕರ ಆಕರ್ಷಿಸುವ ಹಾಗೂ ಗ್ರಾಮೀಣ ಸೊಗಡಿನ ಫೇವರಿಟ್ ಎನ್ನಿಸಿಕೊಂಡಿರುವ ‘ಮಾಗಿ ಸಂಭ್ರಮ’ ಶುರುವಾಯಿತು. ಸಹಜ ಸಮೃದ್ಧ ಹಾಗೂ ಸಹಜ ಸೀಡ್ಸ್ ಆಯೋಜಿಸಿರುವ ಎರಡು ದಿನಗಳ ಮಾಗಿ ಮೇಳಕ್ಕೆ ಜೆಎಸ್‌ಎಸ್ ಆರ್ಯುವೇದ ವೈದ್ಯಕೀಯ ಕಾಲೇಜಿನ ಉಪ ಪ್ರಾಚಾರ್ಯರಾದ ಡಾ.ಶಿವಪ್ರಸಾದ್ ಹುಡೇದ್ ಚಾಲನೆ ನೀಡಿದರು.

ಮೇಳದಲ್ಲಿ ಅವರೆಕಾಯಿ, ತೊಗರಿ ಕಾಯಿ, ಹಸಿ ಕಡಲೆಕಾಯಿ, ಪರ್ಪಲ್ ಯಾಮ್, ಕೆಂಪು ಮುಸುಕಿನ ಜೋಳ, ಬಳ್ಳಿ ಆಲೂಗೆಡ್ಡೆ ಮೊದಲಾದ ಹೊಸದಾಗಿ ಕೊಯ್ಲದ ಬೆಳೆಗಳು ಮಾರಾಟ ಮತ್ತು ಪ್ರದರ್ಶನಕ್ಕೆ ಬಂದಿವೆ. ಎಚ್.ಡಿ. ಕೋಟೆ, ಪಿರಿಯಾಪಟ್ಟಣ, ತುಮಕೂರು, ಧಾರವಾಡ, ಬೆಂಗಳೂರು ಜಿಲ್ಲೆಗಳಿಂದ ಚಿನುಗಲು, ದಬ್ಬೆ, ಕೆಂಪು, ಮಣಿ, ಹಿತ್ತಲ ಅವರೆ ಮಾರಾಟಕ್ಕೆ ಬಂದಿವೆ. ಅವರೆ ಕಾಯಿಯ ಜತೆಗೆ, ಅವರೆಕಾಳು ಉಪ್ಪಿಟ್ಟು , ಅವರೆಕಾಳು ದೋಸೆ, ಮುದ್ದೆ – ಹಿಚುಕಿದ ಅವರೆಕಾಳು ಸಾರು, ಅವರೆಕಾಳು ಬಾತ್, ಅವರೆಕಾಳಿನ ಜಾಮೂನು ಬಾಯಿ ಚಪ್ಪರಿಸಲು ಸಿಗುತ್ತಿವೆ. ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಕಾಳು ಪಲ್ಯದ ಅಡುಗೆಗಳನ್ನು ಸವಿಯಬಹುದು.

ದೇವಧಾನ್ಯ ರೈತ ಉತ್ಪಾದಕರ ಕಂಪನಿಯು ಸಿರಿಧಾನ್ಯ, ಜವಾರಿ ಬೇಳೆಕಾಳುಗಳು ಹಾಗೂ ಕೆಂಪಕ್ಕಿ ಮೊದಲಾದ ದೇಸಿ ಅಕ್ಕಿಗಳನ್ನು ಮಾರಾಟಕ್ಕೆ ತಂದಿದೆ. ಪ್ರದರ್ಶನಕ್ಕೆ ಬಂದಿರುವ ವಿವಿಧ ಗಾತ್ರ ಮತ್ತು ಆಕಾರದ ವೈವಿಧ್ಯಮಯ ಸೋರೆಗಳು ನೋಡುಗರನ್ನು ಆಕರ್ಷಿಸುತ್ತಿವೆ . ಕ್ರಿಸ್ಮಸ್ ಹಬ್ಬಕ್ಕೆ ಆಕರ್ಷಕ ಬೊಂಬೆಗಳು ಹಾಗೂ ವೈವಿಧ್ಯಮಯ ಸೋರೆ ಕಲಾಕೃತಿಗಳನ್ನು ಮಾರಾಟ ಮಾಡಲಾಗುತ್ತಿದೆ.

ಬೇರು ನ್ಯಾಚುರಲ್ ಅವರಿಂದ ಎಳ್ಳುಂಡೆ ಹಾಗೂ ಶಾವಿಗೆ ಮಾರಾಟ ಮಾಡಲಾಗುತ್ತಿದೆ. ಧಾರವಾಡದ ಮಹಿಳಾ ಸ್ವಸಹಾಯ ಸಂಘ ಬ್ಯಾಡಗಿ ಮೆಣಸಿನ ಕಾಯಿಯ ಕಾರದಪುಡಿ, ಮಸಾಲ ಪುಡಿ ಮಾರಾಟ ಮಾಡಲಾಗುತ್ತಿದೆ. ಬೇಲದ ಜ್ಯೂಸ್, ಹುಣಸೇ ಜ್ಯೂಸ್ ಇಲ್ಲಿ ದೊರೆಯುತ್ತದೆ.

ಇದನ್ನೂ ಓದಿ:-ಡಿ.16 ರಂದು ಮಳವಳ್ಳಿಗೆ ರಾಷ್ಟ್ರಪತಿ ಆಗಮನ : ಭದ್ರತಾ ವ್ಯವಸ್ಥೆ ಪರಿಶೀಲನೆ

ಮೈಸೂರಿನ ದೇಸಿ ಸೀಡ್ ಪ್ರೊಡ್ಯೂಸರ್ ಕಂಪನಿಯು ಚಳಿಗಾಲದ ತರಕಾರಿ ಬೀಜ, ಬಳ್ಳಿ ಆಲೂಗಡ್ಡೆ, ಪರ್ಪಲ್ ಯಾಮ್, ಬಿಳಿ ಕಾಚಲ್, ಬಿತ್ತನೆಯ ಬೇಸಿಗೆ ಭತ್ತ ಮತ್ತು ರಾಗಿಯನ್ನು ಮಾರಾಟಕ್ಕೆ ತಂದಿದೆ. ಮರ ತೊಗರಿ ಮತ್ತು ಬೀಟ್ರೂಟ್ ಗೆಣಸು ಕೊಳ್ಳಲು ಜನ ಮುಗಿ ಬಿದ್ದರು.

ಹೆಗ್ಗಡದೇವನಕೋಟೆಯ ಹುಲಿಕಾಡು ರೈತ ಉತ್ಪಾದಕರ ಕಂಪನಿಯು ನಾಡ ತೊಗರಿ, ಅವರೆ, ಗೆಡ್ಡೆ ಗೆಣಸು, ರಾಗಿ ಮತ್ತು ದಿನನಿತ್ಯದ ಅಕ್ಕಿಗಳನ್ನು ಮೇಳಕ್ಕೆ ತಂದಿದ್ದಾರೆ. ಸಿರಿಧಾನ್ಯ ಮತ್ತು ಸಾವಯವ ಪದಾರ್ಥಗಳು, ಮೌಲ್ಯವಽತ ಉತ್ಪನ್ನಗಳು, ಶೃಂಗಾರ ವರ್ಧಕಗಳು, ಕೋತಿ ಓಡಿಸುವ ಬಂದೂಕು, ಬಿದಿರಿನ ಉತ್ಪನ್ನಗಳು ಮತ್ತು ದೇಸಿ ಅಕ್ಕಿಗಳು ಮೇಳದಲ್ಲಿ ಮಾರಾಟಕ್ಕೆ ಇವೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ದೇಸಿ ತಳಿಗಳ ಸಂರಕ್ಷಕ ಕಾಳಪ್ಪ, ಪ್ರಸ್ತುತ ೩೬೫ ದಿನವೂ ಅವರೆಕಾಳು ದೊರೆಯುತ್ತಿದೆ. ಆದರೆ, ನಾಟಿ ಅವರೆಕಾಳು ಚಳಿಗಾಲದ ಸಂದರ್ಭದಲ್ಲಿ ಮಾತ್ರ ದೊರೆಯುತ್ತದೆ. ಹೈಬ್ರೀಡ್ ತಳಿಯ ಅವರೆಕಾಳು ವರ್ಷದ ಎಲ್ಲ ದಿನವೂ ದೊರೆತರೂ ಅದರಲ್ಲಿ ಸ್ವಾದ ಹಾಗೂ ಸುವಾಸನೆ ಇಲ್ಲ. ಹೈಬ್ರೀಡ್ ತಳಿಗಳಿಗೆ ಹೆಚ್ಚಿನ ರೋಗ ಕಾಣಿಸಿಕೊಳ್ಳುತ್ತದೆ. ಆದರೆ, ನಾಟಿ ತಳಿಗಳಲ್ಲಿ ಹೆಚ್ಚು ರೋಗ ಕಾಣಿಸಿಕೊಳ್ಳುವುದಿಲ್ಲ ಎಂದರು.
ಜೆಎಸ್‌ಎಸ್ ಆಯುರ್ವೇದ ಕಾಲೇಜಿನ ಉಪಪ್ರಾಂಶುಪಾಲ ಶಿವಪ್ರಸಾದ್ ಮಾತನಾಡಿ, ಸಹಜ ಸಮೃದ್ಧ ಸಂಸ್ಥೆ ಯಾವಾಗಲೂ ರೈತ ಪರವಾದ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ. ಹಳ್ಳಿಯ ಸೊಗಡನ್ನು ನಗರದ ಜನರಿಗೆ ಪರಿಚಯಿಸುವ ಕಾರ್ಯವನ್ನು ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅವರೆಕಾಳು ಇದೀಗ ವರ್ಷದ ಎಲ್ಲ ದಿನವೂ ದೊರೆಯುತ್ತದೆ. ಆದರೆ, ವಿವಿಧ ಋತುಮಾನಗಳಲ್ಲಿ ದೊರೆಯುವ ಧವಸ ಧಾನ್ಯ ಗಳನ್ನು ಬಳಕೆ ಮಾಡುವುದು ಆರೋಗ್ಯ ದೃಷ್ಟಿಯಿಂದ ಉತ್ತಮ. ಹೈಬ್ರೀಡ್ ತಳಿಗಳ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು. ವೇದಿಕೆಯಲ್ಲಿ ಪ್ರಗತಿಪರ ಕೃಷಿಕರಾದ ಎಚ್.ಡಿ.ಕೋಟೆಯ ನಾಗಮ್ಮ, ಧಾರವಾಡದ ನೂರ್‌ಜಾನ್, ರಜಿಯಾ ಬೇಗಂ ಹಾಗೂ ಇತರರು ಹಾಜರಿದ್ದರು.

ವೈವಿಧ್ಯಮಯ ಸೋರೆಕಾಯಿಗಳು
‘ಮಾಗಿ ಸಂಭ್ರಮ’ ಮೇಳದಲ್ಲಿ ಹಲವು ತಳಿಯ ಸೋರೆ ಕಾಯಿಗಳು ಗಮನ ಸೆಳೆಯುತ್ತಿವೆ. ಡೈನೋಸಾರ್‌ಅನ್ನು ಹೋಲುವ ಡೈನೋಸಾರ್ ಸೋರೆ ಅದೇ ರೀತಿ ತಂಬೂರಿಯನ್ನು ಹೋಲುವ ತಂಬೂರಿ ಸೋರೆ, ಹಂಸವನ್ನು ಹೋಲುವ ಹಂಸ ಸೋರೆ ಗಮನ ಸೆಳೆಯುತ್ತಿವೆ. ಇದರ ಜತೆಗೆ ಚೆಂಡು ಸೋರೆ, ಬೇಸಿಗೆ ಸೋರೆ, ಹಸಿರು ತಬಲ ಸೋರೆ, ತಬಲ ಸೋರೆ, ಸಿತಾರ ಸೋರೆ, ಉದ್ದ ಸೋರೆ, ಮೊಟ್ಟೆ ಸೋರೆ, ಕೊಡತಿ ಸೋರೆ, ಗೊಂಬೆ ಸೋರೆ, ಪಶ್ಚಿಮ ಬಂಗಾಳ ಸೋರೆ, ಗೊಂಬೆ ಸೋರೆ, ಕಹಿ ಸೋರೆ, ಅಸ್ಸಾಂ ಸೋರೆ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

Tags:
error: Content is protected !!