ಮೈಸೂರು: ಈ ಬಾರಿಯ ದಸರಾವನ್ನು ಹೊಸ ಸಿಎಂ ಉದ್ಘಾಟನೆ ಮಾಡುತ್ತಾರೆ ಎಂಬ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ತಿರುಗೇಟು ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಈ ಬಾರಿ ಸಿಎಂ ಸಿದ್ದರಾಮಯ್ಯ ಅವರೇ ದಸರಾ ಮಾಡ್ತಾರೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಕಾಂಗ್ರೆಸ್ ಬಗ್ಗೆ ಆಗಲಿ ಸಿಎಂ ಬಗ್ಗೆ ಆಗಲಿ ಬಿಜೆಪಿಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ಇನ್ನು ಸೆಪ್ಟೆಂಬರ್‌ನಲ್ಲಿ ರಾಜಕೀಯ ಕ್ರಾಂತಿ ಆಗುತ್ತೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾವ ಕ್ರಾಂತಿಯೂ ಆಗಲ್ಲ. ಸಂಕ್ರಾಂತಿ ಎಲ್ಲರೂ ಚೆನ್ನಾಗಿ ಆಚರಣೆ ಮಾಡ್ತಾರೆ ಎಂದು ಮಾಧ್ಯಮಗಳ ಕಾಲೆಳೆದರು. ಇರೋದು ಒಂದೇ ಸಿಎಂ ಖುರ್ಚಿ. ಒಬ್ಬರೇ ಸಿಎಂ ಆಗೋಕೆ ಸಾಧ್ಯ. ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿದೆ. ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಇನ್ನು ಸಿಎಂ ಬದಲಾಗುತ್ತಾರೆ ಎಂಬ ಕಾಂಗ್ರೆಸ್ ಶಾಸಕರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅವರು ಯಾವ ಅರ್ಥದಲ್ಲಿ ಹೇಳುತ್ತಿದ್ದಾರೆ ನನಗೆ ಗೊತ್ತಿಲ್ಲ. ನಾನು ಹೈಕಮಾಂಡ್ ಸಭೆಯಲ್ಲಿ ಇರಲಿಲ್ಲ. ಒಂದು ವೇಳೆ ಒಪ್ಪಂದ ಆಗಿದ್ರೆ ಅದು ನಮಗೆ ಗೊತ್ತಿಲ್ಲ. ಎಲ್ಲವೂ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು.
ಇನ್ನು ಚಾಮರಾಜನಗರದಲ್ಲಿ ಈ ಬಾರಿ ದಸರಾ ಆಚರಣೆ ಇಲ್ಲ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೈಸೂರಿನ ದಸರಾವನ್ನು ಎಲ್ಲರೂ ನೋಡಲಿ ಇಲ್ಲಿನ ದಸರಾದ ಮಹತ್ವ ಕಡಿಮೆ ಆಗಬಾರದು ಎಂದು ಸಿಎಂ ಸಿದ್ದರಾಮಯ್ಯ ಈ ನಿರ್ಧಾರ ಮಾಡಿದ್ದಾರೆ. ದಸರಾ ಅಂದ್ರೆ ಅದು ಮೈಸೂರು. ಹಾಗಾಗಿ ಈ ಬಾರಿ ಈ ನಿರ್ಧಾರ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.





