ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇಂದು ಸಂಜೆಯ ವೇಳೆಗೆ ಎರಡನೇ ತಂಡದ ಗಜಪಡೆ ಮೈಸೂರಿಗೆ ಆಗಮಿಸಲಿವೆ.
ಈಗಾಗಲೇ ಮೊದಲನೇ ತಂಡದ 9 ಆನೆಗಳು ಮೈಸೂರಿನ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದು, ಬೆಳಿಗ್ಗೆ ಹಾಗೂ ಸಂಜೆ ತಾಲೀಮು ನಡೆಸುತ್ತಿವೆ. ಇಂದು ಸಂಜೆಯ ವೇಳೆಗೆ ಎರಡನೇ ತಂಡದ ಐದು ಆನೆಗಳು ಮೈಸೂರಿಗೆ ಆಗಮಿಸಲಿದ್ದು, ದಸರಾ ಮಹೋತ್ಸವ ಇಂದಿನಿಂದ ಮತ್ತಷ್ಟು ರಂಗೇರಲಿದೆ.
ಮತ್ತಿಗೋಡು ಶಿಬಿರದಿಂದ ಶ್ರೀಕಂಠ (56), ಭೀಮನಕಟ್ಟೆ ಆನೆ ಶಿಬಿರದಿಂದ ರೂಪ (44), ದುಬಾರಿ ಆನೆ ಶಿಬಿರದಿಂದ ಗೋಪಿ (42), ಸುಗ್ರೀವ (43) ಹಾಗೂ ಹೇಮಾವತಿ (11) ಆನೆಗಳು ಇಂದು ಸಂಜೆ 4 ಗಂಟೆ ಸುಮಾರಿಗೆ ಅರಮನೆ ಆವರಣಕ್ಕೆ ಎಂಟ್ರಿಯಾಗಲಿವೆ.
ನಾಳೆಯಿಂದ ಒಟ್ಟು 14 ಆನೆಗಳು ತಾಲೀಮು ನಡೆಸಲಿದ್ದು, ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಎಲ್ಲಾ ರೀತಿಯಲ್ಲೂ ಸಿದ್ಧತೆ ನಡೆಸಲಿವೆ.
ಇನ್ನು ಮೈಸೂರು ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದು, ಈ ಬಾರಿ ಅದ್ಧೂರಿ ದಸರಾ ನಡೆಯಲಿರುವ ಹಿನ್ನೆಲೆಯಲ್ಲಿ ಸರ್ಕಾರವೂ ಕೂಡ ದಸರಾದ ರೂಪುರೇಷೆಗಳನ್ನು ತಯಾರು ಮಾಡಿಕೊಂಡಿದೆ.
ಈಗಾಗಲೇ ದಸರಾ ಉದ್ಘಾಟಕರ ಹೆಸರು ಕೂಡ ಘೋಷಣೆಯಾಗಿದ್ದು, ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.





