ಮೈಸೂರು : ನಾಡಿನ ಅದಿ ದೇವತೆ ಚಾಮುಂಡೇಶ್ವರಿ ಮೇಲೆ ನಂಬಿಕೆ ಇದ್ದರೆ ಬೂಕರ್ ಪ್ರಶಸ್ತಿ ವಿಜೇತರಾದ ಸಾಹಿತಿ ಬಾನು ಮುಷ್ತಾಕ್ ದಸರಾವನ್ನು ಉದ್ಘಾಟನೆ ಮಾಡುತ್ತಾರೆ. ನಂಬಿಕೆ ಇಲ್ಲ ಅಂದರೆ ಅವರು ಬರುವುದೇ ಇಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಬಹಳ ಚುಟುಕಾಗಿ ತಿಳಿಸಿದರು.
ದಸರಾ ಉದ್ಘಾಟಕರ ಆಯ್ಕೆ ಬಗ್ಗೆ ನಡೆಯುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಹಿಂದೆ ಕೂಡ ಕೆ.ಎಸ್.ನಿಸಾರ್ ಅಹಮ್ಮದ್ ಅವರು ದಸರಾ ಉದ್ಘಾಟನೆ ಮಾಡಿದ್ದರು. ಕೆಲವರು ಆ ಅಧ್ಯಯನ, ಈ ಅಧ್ಯಯನ ಎನ್ನುತ್ತಾ ಮಾತನಾಡುತ್ತಾರೆ. ನಮಗೆ ಅದ್ಯಾವುದು ಗೊತ್ತಾಗುವುದು ಇಲ್ಲ. ಏಕೆಂದರೆ ಹಗಲು-ರಾತ್ರಿ ನಾನು ಯಾವಾಗಲೂ ಕಾರ್ಯಕರ್ತರ ಜೊತೆಯಲ್ಲೇ ಇರುತ್ತೇನೆ. ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿ ಕುರಿತು ಸದಾ ಚಿಂತನೆ ನಡೆಸುತ್ತಿರುತ್ತೇನೆ. ಹೀಗಾಗಿ ಈ ವಿಷಯಗಳ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ ಎಂದರು.
ದಸರಾ ಉತ್ಸವನ್ನು ಯಾರು ಉದ್ಘಾಟನೆ ಮಾಡಬೇಕು ಎನ್ನುವ ವಿಚಾರವನ್ನು ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಟ್ಟಿದ್ದರು. ಅದರಂತೆ ಮುಖ್ಯಮಂತ್ರಿಗಳು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.



