ಮೈಸೂರು: ಬ್ರಿಟಿಷರು ಭಾರತವನ್ನು ಆರ್ಥಿಕವಾಗಿ ಶೋಷಣೆ ಮಾಡಿದರೂ, ಸ್ಮಾರಕಗಳ ಸಂರಕ್ಷಣೆಯಲ್ಲಿ ವಿಶೇಷ ಪಾತ್ರವಹಿಸಿದ್ದರು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿವೃತ್ತ ವ್ಯವಸ್ಥಾಪಕ ಎಸ್.ಸುಬ್ಬರಾಮನ್ ತಿಳಿಸಿದರು.
ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗವು ‘ಇಂಡಿಯನ್ ನಾಲೆಡ್ಜ್ ಸಿಸ್ಟಂ (ಐಕೆಎಸ್)’ ಕುರಿತು ಸೋಮವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
‘ಬೆಲೆ ಬಾಳುವ ಪುರಾತನ ವರ್ಣಚಿತ್ರ, ಸ್ಮಾರಕ ರಕ್ಷಿಸಲು ಬಣ್ಣಗಳ ಬಗ್ಗೆ ತಿಳಿದಿದ್ದರೆ ಸಾಲದು, ಪುರಾತತ್ವ ವಿಚಾರಗಳ ಬಗ್ಗೆ ಆಸಕ್ತಿಯೂ ಇರಬೇಕು. ಹೈದರಾಬಾದ್‌ನ ನಿಜಾಮರು ಹಾಗೂ ಇನ್ನೂ ಅನೇಕ ರಾಜರು ದೇಶದ ಐತಿಹಾಸಿಕ ಕಲಾ ಸಂಪತ್ತನ್ನು ಉಳಿಸುವಲ್ಲಿ ಶ್ರಮಿಸಿದ್ದರಿಂದ, ಇಂದಿನ ಪೀಳಿಗೆಗೆ ನಮ್ಮ ದೇಶದ ಕಲಾ ಶ್ರೀಮಂತಿಕೆಯ ಬಗ್ಗೆ ಅರಿಯಲು ಸಾಧ್ಯವಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ. ವಿಶ್ವನಾಥ್, ಕಾಲೇಜಿನ ಉಪಾಧ್ಯಕ್ಷ ಶೋಭಾ ಶಂಕರ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಗೋಪಾಲ್ ರೆಡ್ಡಿ, ಬೆಂಗಳೂರಿನ ಮಾಜಿ ಸಿಇಡಿಟಿ ಅಶೋಕ್ ರಾವ್ ಇದ್ದರು.