ಮೈಸೂರು : ಹೊಸದಿಲ್ಲಿಯಲ್ಲಿ ಬುದ್ಧಗಯಾ ವಿಮೋಚನೆ ಐತಿಹಾಸಿಕ ಚಳವಳಿಯಲ್ಲಿ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬೌದ್ಧ ಚಿಂತಕ, ಹಿರಿಯ ಹೋರಾಟಗಾರ ಬಿ.ಗೋಪಾಲ್ ಹೇಳಿದರು.
ನಗರದ ಮಾನಸಗಂಗೋತ್ರಿಯ ಇಎಂಆರ್‌ಸಿ ಸಭಾಂಗಣದಲ್ಲಿ ಮೈಸೂರು ವಿವಿ ಬುದ್ಧ ಬಳಗದ ವತಿಯಿಂದ ಶನಿವಾರ ನಡೆದ ‘ಬೋದ್ ಗಯಾ ಬುದ್ಧವಿಹಾರ: ಬಿಕ್ಕಟ್ಟು ಮತ್ತು ಪರಿಹಾರ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೌದ್ಧ ಅನುಯಾಯಿಗಳು ದಿಲ್ಲಿ ಚಲೋ ಚಳವಳಿಗೆ ಕೊಡುಗೆ ನೀಡಬೇಕು. ದಿಲ್ಲಿಯಲ್ಲಿ ನಡೆಯುವ ಶಕ್ತಿ ಪ್ರದರ್ಶನವನ್ನು ಬೆಂಬಲಿಸಬೇಕು. ಆ ಮೂಲಕ ದೇಶದ ಸಂದೇಶ ರವಾನಿಸಬೇಕು ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಮಾತನಾಡಿ, ಬಾಬರಿ ಮಸೀದಿಯನ್ನು ರಾಮಮಂದಿರವಾಗಿ ಪರಿವರ್ತಿಸಿದವರ ಜನಸಂಖ್ಯೆ ಎಷ್ಟಿದೆ. ಬುದ್ಧನನ್ನು ಅನುಸರಿಸುವವರ ಸಂಖ್ಯೆ ಎಷ್ಟಿದೆ? ಹಾಗಂತ ಅಕ್ರಮಣ ಮಾಡುವುದು ಬೇಡ. ಕಾನೂನು ಮೂಲಕ ಸುರ್ಪದಿಗೆ ಪಡೆಯಲು ಮುಂದಾಗಬೇಕು ಎಂದು ಹೇಳಿದರು.
ಕೊಳ್ಳೇಗಾಲ ಜೇತವನದ ಮನೋರಖ್ಖಿತ ಬಂತೇಜಿ ಮಾತನಾಡಿ, ಮೀಸಲಾತಿ ಕ್ಷೇತ್ರದಿಂದ ಆಯ್ಕೆಯಾಗಿರುವ ತಮ್ಮ ಜನಗಳ ಕಷ್ಟ ಕೇಳದವರನ್ನು ಕೆಳಕ್ಕೆ ಇಳಿಸಬೇಕು. ಮೈಸೂರು ವಿವಿಗೆ ಪ್ರಾಧ್ಯಾಪಕರನ್ನು ನೇಮಕವಾಗದೇ ನಿಸ್ತೇಜವಾಗಿದೆ. ಪ್ರಾಥಮಿಕ ಶಾಲೆಗೆ ಶಿಕ್ಷಕರನ್ನು ನೇಮಕ ಮಾಡುತ್ತಿಲ್ಲ. ಅತಿಥಿ ಉಪನ್ಯಾಸಕರು ಅರೆಹೊಟ್ಟೆಯಲ್ಲಿ ಪಾಠ ಮಾಡಬೇಕಾದ ಸ್ಥಿತಿ ಇದೆ ಎಂದರು.
ಮೈಸೂರು ವಿವಿ ಡೀನ್ ಪ್ರೊ.ಗುರುಸಿದ್ದಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬುದ್ಧಗಯಾದಿಂದ ಬಿಹಾರ ಸರ್ಕಾರಕ್ಕೆ ವಾರ್ಷಿಕ 450 ಕೋಟಿ ರೂ. ಆದಾಯ ಇದೆ. ಬುದ್ಧಗಯಾದಲ್ಲಿ ನಾಲ್ವರು ಹಿಂದುಗಳು, ನಾಲ್ವರು ಬೌದ್ಧ ಬಿಕ್ಕುಗಳ ಸಮಿತಿ ಇದೆ. ಸಮಿತಿ ಅಧ್ಯಕ್ಷ ಜಿಲ್ಲಾಧಿಕಾರಿಯಾದರೆ ಹಿಂದುಗಳ ಕೈ ಮೇಲಾಗುತ್ತದೆ ಎಂಬ ಕಾರಣಕ್ಕೆ ಸಮಸ್ಯೆ ಉದ್ಭವವಾಗಿದೆ ಎಂದರು.
ಮುಸ್ಲಿಮರಿಗೆ ಮೆಕ್ಕಾ, ಕ್ರಿಶ್ಚಿಯನ್ನರಿಗೆ ವ್ಯಾಟಿಕನ್, ಹಿಂದೂಗಳಿಗೆ ಕಾಶಿ, ವಾರಣಾಸಿ ಇರುವಂತೆ ಬುದ್ಧ ಅನುಯಾಯಿಗಳಿಗೆ ಬುದ್ಧಗಯಾ ಪವಿತ್ರ ಸ್ಥಳವಾಗಿದೆ. ಬುದ್ಧಗಯಾದ ಸಂಪೂರ್ಣ ನಿರ್ವಹಣೆ ಬಿಕ್ಕುಗಳಿಗೆ ದೊರೆಯಬೇಕು ಎಂದು ಪ್ರತಿಪಾದಿಸಿದರು.




