ಮೈಸೂರು : ಕಬ್ಬು ಬೆಳೆಗಾರರ ನಡುವೆ ತಾರತಮ್ಯ ನಿಲ್ಲಿಸಿ, ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಳೆದು ಟನ್ ಕಬ್ಬಿಗೆ ೩,೨೦೦ ರೂ. ಅಥವಾ ಕಟಾವು ಮತ್ತು ಸಾಗಾಣಿಕೆ ವೆಚ್ಚ ಸೇರಿಸಿ ಟನ್ ಕಬ್ಬಿಗೆ ೪,೦೦೦ ರೂ. ಸರ್ಕಾರ ನಿಗದಿಪಡಿಸಬೇಕು ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿದೆ.
ರಾಜ್ಯಾದ್ಯಂತ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ಕಬ್ಬು ಬೆಳೆಗಳಿಗೆ ಸರ್ಕಾರ ಏಕರೂಪ ದರ ನಿಗದಿಗೊಳಿಸಬೇಕು ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್ ರಾಜ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕಬ್ಬು ಬೆಳೆಗಾರರ ಹೋರಾಟ ತೀವ್ರವಾದಾಗ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಟನ್ ಕಬ್ಬಿಗೆ ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಳೆದು ೩,೨೦೦ ರೂ. ಹಾಗೂ ೩,೩೦೦ ರೂ. ನಿಗದಿಪಡಿಸಿದೆ. ಆದರೆ, ಈ ದರ ವನ್ನು ದಕ್ಷಿಣ ಕರ್ನಾಟಕ ಜಿಲ್ಲೆಗಳ ಬೆಳೆಗಾರರಿಗೆ ನೀಡದೇ ತಾರತಮ್ಯ ಮಾಡಲಾಗುತ್ತಿದೆ. ಈ ರೀತಿ ಕಬ್ಬು ಬೆಳೆಗಾರರನ್ನು ಒಡೆದಾಳುವ ನೀತಿ ಸರಿಯಲ್ಲ. ಉತ್ತರ ಕನಾಟಕದ ಕಬ್ಬು ಬೆಳೆಗಾರರಿಗೆ ಹೋಲಿಸಿದರೆ ದಕ್ಷಿಣ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಸುಮಾರು ೧ ಸಾವಿರ ರೂ. ನಷ್ಟವುಂಟಾಗುತ್ತಿದೆ. ಆದರೆ, ರಾಜ್ಯದ ಎಲ್ಲೆಡೆ ಕಬ್ಬು ಬೆಳೆಯಲು ತಗಲುವ ವೆಚ್ಚ ಒಂದೇ ಆಗಿರುತ್ತದೆ ಎಂದು ತಿಳಿಸಿದರು.
ಇದನ್ನು ಓದಿ: ರೈತರ ಸಂಜೀವಿನಿಯಾದ ಹಾಲು ಉತ್ಪಾದನಾ ಕ್ಷೇತ್ರ : ಶಾಸಕ ಜಿ.ಟಿ.ದೇವೇಗೌಡ
ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಜಿಲ್ಲಾಧ್ಯಕ್ಷ ಚಿಕ್ಕಣ್ಣೇಗೌಡ, ಸದಸ್ಯರಾದ ಸತೀಶ್, ಸಣ್ಣ ನಾಯಕ, ಮಾದಪ್ಪ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಕಬ್ಬು ಬೆಳೆಗಾರರ ಪ್ರಮುಖ ಹಕ್ಕೊತ್ತಾಯಗಳು
* ಹರಿಯಾಣ, ಉತ್ತರ ಪ್ರದೇಶ, ತಮಿಳುನಾಡು ಮಾದರಿಯಲ್ಲಿ ಪ್ರತಿ ಟನ್ ಕಬ್ಬಿಗೆ ಸರ್ಕಾರ ೫೦೦ ರೂ. ಎಸ್‌ಎಪಿ ನಿಗದಿಗೊಳಿಸಬೇಕು
* ಈ ಹಿಂದೆ ನಿಗದಿಪಡಿಸಿದ್ದ ಟನ್ ಕಬ್ಬಿಗೆ ೧೫೦ ರೂ.ಗಳ ಬಾಕಿಯನ್ನು ಕೂಡಲೇ ಪಾವತಿಸಬೇಕು
* ಕಬ್ಬಿನ ಉಪ ಉತ್ಪನ್ನಗಳಾದ ಮೊಲಾಸಸ್, ಕಾಕಂಬಿ, ಬಗಾಸ್, ಡಿಸ್ಟಿಲರಿ, ಕೋಜೆನ್ ಮೊದಲಾದವುಗಳ ಲಾಭಾಂಶದಲ್ಲಿ ಶೇ.೫೦ ಪಾಲು ರೈತರಿಗೆ ನೀಡಬೇಕು.





