ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದಿನಿಂದ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದು, ರಾಜ್ಯಾದ್ಯಂತ ಸಾರಿಗೆ ಬಸ್ ಬಂದ್ ಆಗಿವೆ.
ಬಾಕಿ ವೇತನಕ್ಕೆ ಆಗ್ರಹಿಸಿ ಸಾರಿಗೆ ನೌಕರರು ಸಾರಿಗೆ ಬಸ್ ಬಂದ್ ಮಾಡಿದ್ದು, ಬಸ್‌ಗಳಿಲ್ಲದೇ ಪ್ರಯಾಣಿಕರು ದೂರದ ಊರಿಗೆ ತೆರಳಲು ನಿಲ್ದಾಣದಲ್ಲೇ ಕಾದು ಕಾದು ಸುಸ್ತಾಗಿದ್ದಾರೆ.
ಹೈಕೋರ್ಟ್ ಆದೇಶಕ್ಕೂ ಬಗ್ಗದ ನೌಕರರು, ಇಂದು ಬೆಳಿಗ್ಗೆ ಆರು ಗಂಟೆಯಿಂದಲೇ ಮುಷ್ಕರ ನಡೆಸುತ್ತಿದ್ದು, ರಾಜ್ಯ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ.
ಮೈಸೂರಿನ ಕೇಂದ್ರ ಬಸ್ ನಿಲ್ದಾಣ ಹಾಗೂ ಸಿಟಿ ಬಸ್ ನಿಲ್ದಾಣ ಬಸ್‌ಗಳಿಲ್ಲದೇ ಬಿಕೋ ಎನ್ನುತ್ತಿದ್ದು, ಪ್ರಯಾಣಿಕರು ತೀವ್ರ ಪರದಾಟ ನಡೆಸುತ್ತಿದ್ದಾರೆ.
ಮುಷ್ಕರದ ಬಗ್ಗೆ ಮಾಹಿತಿ ಇಲ್ಲದೇ ಊರುಗಳಿಗೆ ತೆರಳಲು ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಬಸ್‌ಗಾಗಿ ಕಾದು ಕಾದು ಸುಸ್ತಾಗಿದ್ದಾರೆ.
ಇನ್ನು ಶಾಲಾ-ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳು ಪರದಾಟ ನಡೆಸುತ್ತಿದ್ದು, ಕೆಲ ಪ್ರಯಾಣಿಕರು ರಾಜ್ಯ ಸರ್ಕಾರದ ವಿರುದ್ಧವೇ ಕಿಡಿಕಾರುತ್ತಿದ್ದಾರೆ.





