ಮೈಸೂರು : 2028ಕ್ಕೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ, ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಬೇಕು. ಅಹಿಂದವನ್ನು ಮುನ್ನೆಡೆಸುವ ಶಕ್ತಿ ಹೊಂದಿರುವ ಕಾರಣ ಸಿದ್ದರಾಮಯ್ಯ ಅವರ ನಂತರದ ಉತ್ತರಾಧಿಕಾರಿ ಎನ್ನುವ ಮಾತನ್ನಾಡಲಾಗುತ್ತಿದೆ ಎಂದು ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷರೂ ಆದ ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಜಿಪಂ ಸಭಾಂಗಣದಲ್ಲಿ ಕ್ಷೇತ್ರದ ಅರಣ್ಯ ಸಮಸ್ಯೆಗಳ ಕುರಿತು ಕರೆದಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಐದು ವರ್ಷಗಳ ಕಾಲ ಮುಂದುವರಿಸಬೇಕು ಹಾಗೂ ಬೇಡ ಎಂಬ ವಿಚಾರವಾಗಿ ರಾಜ್ಯದಾದ್ಯಂತ ಚರ್ಚೆ ಜೋರಾಗಿರುವ ನಡುವೆ ಅನಿಲ್ ಚಿಕ್ಕಮಾದು,ನಾಯಕ ಸಮುದಾಯದ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದರು.
ಸಿದ್ದರಾಮಯ್ಯ ಸಿಎಂ ಆಗಿ ಐದು ವರ್ಷಗಳನ್ನು ಪೂರೈಸಿದರೆ ಸಂತಸವಾಗಲಿದೆ. ಆದರೆ ಈ ನಿರ್ಧಾರವಾಗಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರವೇ ಅಂತಿಮವಾಗಿದೆ ಎಂದರು.
೨೦೨೮ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಬುದ್ಧ,ಬಸವ ಹಾಗೂ ಅಂಬೇಡ್ಕರ್ ಅನುಯಾಯಿಯಾಗಿರುವ ಸತೀಶ್ ಜಾರಕಿಹೊಳಿಗೆ ಸಿಎಂ ಸ್ಥಾನ ಸಿಗಬೇಕು ಎಂದು ಹೇಳಿದರು.
ಇದನ್ನೂ ಓದಿ:-ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ : ಸ್ಪೀಕರ್ ಯು.ಟಿ.ಖಾದರ್
ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಸಿಗಬೇಕು ಎಂಬ ಬೇಡಿಕೆ ಇದೆ ಎಂಬ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ಜನಾಂಗದಲ್ಲಿ ೫ನೇ ಸ್ಥಾನದಲ್ಲಿರುವ ನಾಯಕ ಸಮುದಾಯಕ್ಕೆ ಅಂದಿನಿಂದ ಇಂದಿನವರೆಗೂ ಸಿಎಂ ಸ್ಥಾನ ಸಿಕ್ಕಿಲ್ಲ, ಹಾಗಾಗಿ ನಾಯಕ ಸಮುದಾಯದ ಪ್ರಬಲ ನಾಯಕರಾಗಿರುವ ಸತೀಶ್ ಜಾರಕಿಹೊಳಿ ಅವರಿಗೆ ಸಿಎಂ ಸ್ಥಾನ ಸಿಗಬೇಕಿದೆ. ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಕಾಡು ಪ್ರಾಣಿ ಓಡಿಸಲು ಹೊಸ ಪ್ಲಾನ್:
ಆನೆ,ಹುಲಿ,ಚಿರತೆ ಇತರೆ ಕಾಡು ಪ್ರಾಣಿಗಳ ಕಾಡಂಚಿನ ಗ್ರಾಮ ಹಾಗೂ ಇತರೆ ಪ್ರದೇಶಗಳಿಗೆ ಬಂದರೆ, ಕಣ್ಣಿಗೆ ಲೈಟ್ ಬಿಟ್ಟು ಓಡಿಸುವ ಯೋಜನೆ ಚಿಂತನೆ ನಡೆಸಲಾಗಿದೆ.ಹುಲಿ,ಚಿರತೆ,ಕಾಡಾನೆ, ಸೆರೆಗೆ ಕಾರ್ಯಪಡೆಯೊಂದಿಗೆ ಉನ್ನತ ಅಧಿಕಾರಿಗಳನ್ನು ನೇಮಿಸುವ ಚಿಂತನೆ ಕೂಡ ನಡೆಯುತ್ತಿದೆ. ಕಾಡು ಪ್ರಾಣಿಗಳು ಗ್ರಾಮ ಹಾಗೂ ಜಮೀನಿಗೆ ಬಂದಾಗ, ಸಾರುವ ಪದ್ಧತಿ ಹಿಂದೆ ಇತ್ತು, ಅದನ್ನು ಮತ್ತೆ ಜಾರಿಗೊಳಿಸಲಾಗುವುದು ಎಂದರು.





