ಮೈಸೂರು: ಸುಳ್ಳು ಅಪಪ್ರಚಾರ ಮಾಡುತ್ತಿರುವ ಬಿಜೆಪಿಗೆ ತಕ್ಕ ಉತ್ತರ ನೀಡಲು ನಾವು ಸಾಧನಾ ಸಮಾವೇಶ ಮಾಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಾಳೆ ಮೈಸೂರಿನಲ್ಲಿ ನಡೆಯುವ ಸಾಧನಾ ಸಮಾವೇಶಕ್ಕೆ ಬಿಜೆಪಿ ಟೀಕೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸುಳ್ಳು ಅಪಪ್ರಚಾರ ಮಾಡುತ್ತಿರುವ ಬಿಜೆಪಿಗೆ ಉತ್ತರ ನೀಡಲು ನಾವು ಸಮಾವೇಶ ಮಾಡುತ್ತಿದ್ದೇವೆ. ಅಭಿವೃದ್ಧಿಗೆ ದುಡ್ಡಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಆದರೆ ನಾವು ಸಾವಿರಾರು ಕೋಟಿ ಹಣವನ್ನ ಒಂದೇ ನಗರಕ್ಕೆ ಮಂಜೂರು ಮಾಡಿದ್ದೇವೆ. ಇದನ್ನು ಜನರಿಗೆ ಹೇಳಲು ಸಮಾವೇಶ ಮಾಡುತ್ತಿದ್ದೇವೆ. ಬಿಜೆಪಿಯಿಂದ ಯಾವ ಅಭಿವೃದ್ಧಿಯೂ ಆಗಿಲ್ಲ. ಇದು ಸಾಧನ ಸಮಾವೇಶ ಹೊರತು ಶಕ್ತಿ ಸಮಾವೇಶ ಅಲ್ಲ ಎಂದು ಸ್ಪಷ್ಟನೆ ನೀಡಿದರು.
ಇನ್ನು ದಲಿತರಿಗೆ ನಾಯಕತ್ವ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ ಮಾತ್ರ ಸಂವಿಧಾನದ ಆಶಯ ಎತ್ತಿ ಹಿಡಿದು ದಲಿತರಿಗೆ ನ್ಯಾಯ ಕೊಟ್ಟಿದೆ. ಮಲ್ಲಿಕಾರ್ಜುನ ಖರ್ಗೆ ನಮ್ಮ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಈಗ ನರೇಂದ್ರ ಮೋದಿ ಬದಲು, ಬೇರೊಬ್ಬ ದಲಿತರನ್ನು ಪ್ರಧಾನ ಮಂತ್ರಿ ಮಾಡಲು ಹೇಳಲಿ. ವಿಜಯೇಂದ್ರ ಅವರೇ ತಮ್ಮ ಅಧ್ಯಕ್ಷ ಸ್ಥಾನವನ್ನ ದಲಿತರಿಗೆ ಬಿಟ್ಟು ಕೊಡಲಿ ಎಂದು ಆಗ್ರಹಿಸಿದರು.





