ಮೈಸೂರು: ಕಳೆದ ಮೂರು ತಿಂಗಳಿನಿಂದ ರಾಜ್ಯದಲ್ಲಿ ತೀವ್ರ ತಾಪಮಾನ ಹೆಚ್ಚಾಗಿದ್ದು, ಬಿಸಿಲ ಬೇಗೆಗೆ ಜನರು ಹೈರಾಣಾಗಿದ್ದಾರೆ. ಪರಿಣಾಮ ದೇಹಕ್ಕೆ ತಂಪು ಹಾಗೂ ಮನಸ್ಸಿಗೆ ಹಿತ ನೀಡುವ ಐಸ್ ಆ್ಯಪಲ್ ಮೈಸೂರು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ಕನ್ನಡದಲ್ಲಿ ಪಣ ಎಳನೀರು, ತಾಟಿನಿಂಕು ಎಂದು ಕರೆಯುವ ಐಸ್ ಆ್ಯಪಲ್ ದೇಹಕ್ಕೆ ಬಹಳ ತಂಪು. ಈ ಹಿನ್ನೆಲೆಯಲ್ಲಿ ಮೈಸೂರು ನಗರದ ಹಲವಡೆ ಬೀದಿ ಬದಿಗಳಲ್ಲಿ ಐಸ್ ಆ್ಯಪಲ್ ಮಾರಾಟ ಭರ್ಜರಿಯಾಗಿ ನಡೆಯುತ್ತಿದ್ದು, ಮಾರಾಟಗಾರರು ಫುಲ್ ಖುಷ್ ಆಗಿದ್ದಾರೆ.
ತಮಿಳುನಾಡು ಭಾಗದಲ್ಲಿ ಸ್ವಾಭಾವಿಕವಾಗಿ ಸಿಗುವ ಈ ಪಾನೀಯಕ್ಕೆ ಮೈಸೂರಿನಲ್ಲಿ ಫುಲ್ ಡಿಮ್ಯಾಂಡ್ ಶುರುವಾಗಿದ್ದು, ಗ್ರಾಹಕರಂತೂ ಇದನ್ನು ಕೊಂಡುಕೊಳ್ಳಲು ಮುಗಿಬಿದ್ದಿದ್ದಾರೆ. ಮೂರು ಎಳನೀರಿಗೆ ಈ ಒಂದು ಒಣ ಎಳನೀರು ಸಮವಾಗಿದ್ದು, ಸ್ವಲ್ಪ ಪ್ರಮಾಣದ ನೀರು ಇರುವ ಕಾಯಿ ಸೇವಿಸಲು ಗ್ರಾಹಕರು ಮುಗಿಬಿದ್ದಿದ್ದಾರೆ.
ನೆರೆಯ ತಮಿಳುನಾಡಿನ ಆಂಬೂರು, ವೆಲ್ಲೂರು ಜಿಲ್ಲೆಗಳಿಂದ ಬರುವ ಈ ಪಣ ಎಳನೀರಿನ ಕಾಯಿಗೆ 40 ರಿಂದ 50 ರೂ ಬೆಲೆಯಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನಿಂದ ಮೈಸೂರಿಗೆ ಬರುತ್ತಿರುವ ವ್ಯಾಪಾರಸ್ಥರು ಒಳ್ಳೆಯ ಲಾಭ ಮಾಡಿಕೊಂಡು ಹಿಂದಿರುಗುತ್ತಿದ್ದಾರೆ.
ಪಣ ಎಳೆ ನೀರನ್ನು ಕೊಂಡು ಸಂತಸ ವ್ಯಕ್ತಪಡಿಸಿದ ಗ್ರಾಹಕರು, ಇದು ಆರೋಗ್ಯಕ್ಕೆ ಬಹಳ ಅನುಕೂಲಕಾರಿ. ರಾಸಾಯನಿಕಯುಕ್ತ ಪಾನೀಯ ಸೇವನೆ ಬದಲು, ಇಂತಹ ಸೀಜನ್ ಫ್ರೂಟ್ಸ್ ಗಳನ್ನ ಸೇವಿಸಬೇಕು. ಆಗ ಮನುಷ್ಯರಿಗೆ ಯಾವುದೇ ರೋಗಗಳು ಬರಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.





