ಮೈಸೂರು: ಕಾಂಗ್ರೆಸ್ ಶಾಸಕರ ಹೇಳಿಕೆ ನೋಡುತ್ತಿದ್ದರೆ ನವೆಂಬರ್‌ನಲ್ಲಿ ಅಲ್ಲ, ಇನ್ನೂ ಬೇಗನೆ ರಾಜ್ಯದಲ್ಲಿ ಕ್ರಾಂತಿ ಆದರೂ ಆಗಬಹುದು ಎಂದು ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಭವಿಷ್ಯ ನುಡಿದಿದ್ದಾರೆ.
ಅಕ್ಕಿ ಬೇಕಾ ರಸ್ತೆ ಬೇಕಾ ಎಂಬ ಬಸವರಾಜ ರಾಯರೆಡ್ಡಿ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಲ್ಲವೂ ಬೇಕು ಅಂತಾನೆ ಜನರು ನಿಮ್ಮನ್ನು ಗೆಲ್ಲಿಸಿದ್ದಾರೆ. ಇಲ್ಲದಿದ್ದರೆ ನಿಮಗೆ 136 ಸೀಟು ಬರ್ತಾ ಇರಲಿಲ್ಲ. ಎಲ್ಲಾ ಶಾಸಕರು ಕೂಡ ಸರ್ಕಾರದ ವಿರುದ್ಧ ಸಿಡಿಯುತ್ತಿದ್ದಾರೆ. ರಾಜು ಕಾಗೆ, ಬಿ.ಆರ್.ಪಾಟೀಲ್ ಕೂಡ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಅಭಿವೃದ್ದಿ ಬೇಕು ಎಂದು ಶಾಸಕರಿಗೀಗ ಅರ್ಥವಾಗಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಜಾಸ್ತಿ ಆಗಲಿದೆ. ರಾಜ್ಯ ಸರ್ಕಾರ ಸೆಸ್ಕ್‌ನಲ್ಲೂ ಹಣ ಬಾಕಿ ಉಳಿಸಿಕೊಂಡಿದೆ. ಕೆಎಸ್‌ಆರ್‌ಟಿಸಿ ಇಲಾಖೆಯ ಹಣವನ್ನೂ ಬಾಕಿ ಉಳಿಸಿಕೊಂಡಿದೆ. ಇದೀಗ ಅನ್ನಭಾಗ್ಯ ಅಕ್ಕಿ ಸಾಗಿಸುವ ಲಾರಿಗಳ ಹಣವನ್ನು ಕೂಡ ಬಾಕಿ ಉಳಿಸಿಕೊಂಡಿದೆ ಎಂದು ಕಿಡಿಕಾರಿದರು.
ಇನ್ನು ಕೇಂದ್ರ ಬಿಜೆಪಿ ಅಧ್ಯಕ್ಷ ಗಾದಿಗೆ ಅರ್ಧನಾರೀಶ್ವರ ಆಯ್ಕೆಯಾದರೆ ಸಂತೋಷ ಎಂಬ ಪರಿಷತ್ ನಾಯಕ ಬಿಕೆ.ಹರಿಪ್ರಸಾದ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ತೃತೀಯ ಲಿಂಗಿಗಳಿಗೆ ಬಿಕೆ.ಹರಿಪ್ರಸಾದ್ ಮಾಡಿರುವ ಅವಮಾನ. ಇದು ನಾಲಿಗೆ ಮೀರಿದ ವ್ಯಂಗ್ಯವಾದ ಹೇಳಿಕೆ. ಮಾತನಾಡುವಾಗ ಬಹಳ ಯೋಚನೆ ಮಾಡಿ ಮಾತನಾಡಬೇಕು. ಲಂಗು ಲಗಾಮ್ ಇಲ್ಲದ ಹೇಳಿಕೆಗಳನ್ನು ನಾನು ವಿರೋಧಿಸುತ್ತೇನೆ. ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದರಿಂದ ನಾಳೆ ತೃತೀಯ ಲಿಂಗಿಗಳು ಹರಿಪ್ರಸಾದ್ ವಿರುದ್ಧ ಪ್ರತಿಭಟನೆ ಮಾಡಬಹುದು. ತೃತೀಯ ಲಿಂಗಿಗಳನ್ನೇ ಅಧ್ಯಕ್ಷರನ್ನಾಗಿ ಮಾಡಿದರೆ ಏನು ತಪ್ಪು? ತೃತೀಯ ಲಿಂಗಿಗಳಿಗೆ ಜೀವನ ಇಲ್ವ. ಬಾಲಿಷ ಹೇಳಿಕೆ ನೀಡುವ ಮೂಲಕ ವಿಷಯಾಂತರ ಮಾಡಲು ಮುಂದಾಗಿದ್ದಾರೆ. ಸದ್ಯದಲ್ಲಿ ನಮ್ಮ ಪಕ್ಷದ ಸಾರಥಿ ಆಯ್ಕೆಯಾಗುತ್ತಾರೆ ಎಂದರು.
ಇನ್ನು ಸಚಿವ ಶಿವರಾಜ ತಂಗಡಗಿ ಗಾಣಿಗ ಸ್ವಾಮೀಜಿ ಬಳಿ ಮಠದ ಅನುದಾನದಲ್ಲಿ ಕಮಿಷನ್ ಕೇಳಿದ್ದಾರೆ. ಇದು ಈಗಾಗಲೇ ರಾಜ್ಯದಾದ್ಯಂತ ಸದ್ದು ಮಾಡ್ತಿದೆ. ಇದನ್ನು ಸ್ವತಃ ಸ್ವಾಮೀಜಿಯವರೇ ಹೇಳಿದ್ದಾರೆ. ಕೋರ್ಟ್ ಬಳಿ ಹೋಗಿ ಹಣ ರಿಲೀಸ್ ಮಾಡಿಸಿಕೊಳ್ಳುವ ಮಟ್ಟಕ್ಕೆ ಹೋಗಿದ್ದಾರೆ. ಇದು ನಮ್ಮ ಪಕ್ಷದ ಸರ್ಕಾರದ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಮೀಸಲಿಟ್ಟಿದ್ದ ಹಣ. ಅದನ್ನು ಬಿಡುಗಡೆ ಮಾಡಲು ಕಮಿಷನ್ ಕೇಳಿದ್ದಾರೆ, ಇದನ್ನು ನಮ್ಮ ಪಕ್ಷ ಖಂಡಿಸುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಅವರು, ನಮ್ಮ ಸಂಸ್ಕೃತಿ ಎತ್ತಿ ಹಿಡಿಯುವ ಕೆಲಸ ಮಾಡದೇ ಇಂತಹ ಕೃತ್ಯಕ್ಕೆ ಕೈಹಾಕಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾವಿದರಿಗೆ, ಕಲಾ ತಂಡಗಳಿಗೆ ಹಣ ಕೊಡ್ಬೇಕು.
ನಮ್ಮ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹಣ ಇಲ್ಲ. ಈ ಸರ್ಕಾರದಲ್ಲಿ ಏನು ಮಾಡಿದರೂ ನಾವು ತಪ್ಪಿಸಿಕೊಳ್ಳಬಹುದು ಎಂದುಕೊಂಡಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಶಿವರಾಜ ತಂಗಡಗಿ ಅವರು ಎಂದು ವಾಗ್ದಾಳಿ ನಡೆಸಿದರು.





