ಮೈಸೂರು: ಕಾವೇರಿ ಹಿನ್ನೀರಿನಲ್ಲಿ ಅನೈತಿಕ ಚಟುವಟಿಕೆ ಬಗ್ಗೆ ವರದಿ ಬಂದ ಬಳಿಕ ಪೊಲೀಸರು ಕ್ವಿಕ್ ರಿಯಾಕ್ಷನ್ ತೆಗೆದುಕೊಂಡಿದ್ದು, ಮೀನಾಕ್ಷಿಪುರಕ್ಕೆ ಹೋಗುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.
ತಾಲ್ಲೂಕಿನ ಮೀನಾಕ್ಷಿಪುರದಲ್ಲಿ ಯುವಕ-ಯುವತಿಯರು ನೀರಿನ ಆಳಕ್ಕೆ ಕಾರು ಇಳಿಸಿ ಮೋಜು ಮಸ್ತಿ ಮಾಡಿದ್ದು, ಕೆಆರ್‌ಎಸ್ ಹಿನ್ನೀರು ಪ್ರದೇಶ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆಯಾ ಎಂಬ ಪ್ರಶ್ನೆ ಮೂಡಿತ್ತು.
ವಾರದ ಹಿಂದೆಯಷ್ಟೇ ಸಿಎಂ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಿದ್ದರು. ಬಾಗಿನ ಅರ್ಪಣೆ ಮಾಡಿದ ಬಳಿಕವೇ ಡ್ಯಾಂ ಹಿನ್ನೀರಿನಲ್ಲಿ ಅನೈತಿಕ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಯುವಕ-ಯುವತಿಯರು ಮದ್ಯದ ಅಮಲಿನಲ್ಲಿಯೇ ನೀರಿನಲ್ಲಿ ಇಳಿದು ಜೀವದ ಜೊತೆಯೇ ಆಟವಾಡಿದ್ದು, ಕಾವೇರಿ ಮಾತೆಯ ನೀರಿಗೆ ಮೂತ್ರ ವಿಸರ್ಜನೆ ಕೂಡ ಮಾಡಿದ್ದರು.
ಈಜಾಡುವ ನೆಪದಲ್ಲಿ ಅನೈರ್ಮಲ್ಯ ಮಾಡಿದ್ದ ಯುವಸಮೂಹ, ರಾಶಿ- ರಾಶಿ ಪ್ಲಾಸ್ಟಿಕ್ ಪ್ಲೇಟ್ಸ್, ಲೋಟೋ, ಖಾಲಿ ಬಿಯರ್ ಬಾಟಲಿಗಳನ್ನು ನೀರಿಗೆ ಎಸೆದು ಹೋಗಿದ್ದರು.
ಈ ವರದಿ ಎಲ್ಲೆಡೆ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕ್ವಿಕ್ ರಿಯಾಕ್ಷನ್ ತೆಗೆದುಕೊಂಡಿದ್ದು, ಮೀನಾಕ್ಷಿಪುರಕ್ಕೆ ಹೋಗುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.
ಅಕ್ರಮ ಮದ್ಯ ಸಾಗಿಸುತ್ತಿದ್ದ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹಲವು ಕಾರುಗಳಲ್ಲಿದ್ದ ಮದ್ಯದ ಬಾಟಲಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಇನ್ನು ಕಾವೇರಿ ಹಿನ್ನೀರಿನಲ್ಲಿ ಎಣ್ಣೆ ಹೊಡೆಯುವವರನ್ನು ಕೂಡ ಅರೆಸ್ಟ್ ಮಾಡಲಾಗಿದ್ದು, ಅಕ್ರಮ ಮದ್ಯ ಸೇವನೆ, ಮೋಜು- ಮಸ್ತಿಗೆ ಪೊಲೀಸರು ಫುಲ್ ಸ್ಟಾಪ್ ಇಟ್ಟಿದ್ದಾರೆ.





