ಮೈಸೂರು: ಕಳೆದ ನಾಲ್ಕು ದಿನಗಳಿಂದ ಮೈಸೂರು ಮಹಾನಗರ ಪಾಲಿಕೆಯ ನೌಕರರು ಹಾಗೂ ಪೌರ ಕಾರ್ಮಿಕರು ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಮೈಸೂರು ನಗರದ ಬಡಾವಣೆಗಳಲ್ಲಿ ಕಸ ಸಂಗ್ರಹ ಕಾರ್ಯ ಸ್ಥಗಿತಗೊಂಡಿದ್ದು, ಇತ್ತ ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಕೆವಿ ಶ್ರೀಧರ್ ಅವರು ಸ್ವಂತ ಖರ್ಚಿನಿಂದಲೇ ಸ್ವತಃ ತಾವೇ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುತ್ತಿದ್ದಾರೆ.
ಮೈಸೂರಿನ ಹೆಬ್ಬಾಳ್ ಹಾಗೂ ಸೂರ್ಯ ಬೇಕರಿ ಸಮೀಪದ ಬಡಾವಣೆಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಕಸ ಸಂಗ್ರಹಿಸಲು ಪೌರ ಕಾರ್ಮಿಕರು ಬರುತ್ತಿಲ್ಲ. ಆದ್ದರಿಂದ ಶ್ರೀಧರ್ ಅವರು ನಾಲ್ಕು ಟ್ರ್ಯಾಕ್ಟರ್‌ಗಳ ಮೂಲಕ ತಮ್ಮ ವಾರ್ಡ್‌ನಲ್ಲಿ ತಾವು ಹಾಗೂ ಅವರ ಸ್ನೇಹಿತರೊಂದಿಗೆ ಮನೆ ಮನೆಗೆ ತೆರಳಿ ಕಳೆದ ಮೂರು ದಿನಗಳಿಂದ ಸಂಗ್ರಹಗೊಂಡಿದ್ದ ಕಸವನ್ನು ಸಂಗ್ರಹಿಸಿ ಜನರ ಪಾಲಿಗೆ ನೆರವಾಗಿದ್ದಾರೆ.
ಈ ವೇಳೆ ಮಾತನಾಡಿದ ವಾರ್ಡ್‌ನ ನಿವಾಸಿಗಳು, ಪಾಲಿಕೆ ಮಾಜಿ ಸದಸ್ಯ ಕೆವಿ ಶ್ರೀಧರ್ ಅವರು ಯಾವುದೇ ಸಂದರ್ಭದಲ್ಲೂ ಸಮಸ್ಯೆ ಎದುರಾದಾಗ ಒಂದು ಕರೆ ಮಾಡಿದರೆ ಸಾಕು ಅಷ್ಟರಲ್ಲಿ ನಮ್ಮ ಸಮಸ್ಯೆಗೆ ಪರಿಹಾರ ಒದಗಿಸುತ್ತಾರೆ. ಕಳೆದ ನಾಲ್ಕು ದಿನಗಳಿಂದ ಮನೆಯಲ್ಲೇ ಕಸ ಸಂಗ್ರಹವಾಗಿದ್ದರಿಂದ ಸೊಳ್ಳೆಗಳ ಕಾಟವು ಹೆಚ್ಚಾಗಿತ್ತು. ಸದ್ಯ ಇಂದು ಅವರೇ ಟ್ರ್ಯಾಕ್ಟರ್ ಮೂಲಕ ಕಸ ಸಂಗ್ರಹಿಸುತ್ತಿದ್ದಾರೆ. ಆದ್ದರಿಂದ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.





