ಮೈಸೂರು: ನಗರದಲ್ಲಿ ಆನೆಗಳ ಹಾವಳಿ ಇರುವ ಪ್ರದೇಶಗಳಲ್ಲಿ ತೋಡಲಾಗಿರುವ ಆನೆ ಕಂದಕಗಳು ಮತ್ತು ಸೌರ ಬೇಲಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ವರದಿ ನೀಡಬೇಕೆಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಅರಣ್ಯ ಭವನದಲ್ಲಿಂದು ಮಾತನಾಡಿದ ಅವರು, ಮಾನವ-ವನ್ಯಜೀವಿಗಳ ಸಂಘರ್ಷ ತಡೆಗಟ್ಟಲು ಪ್ರಾಣಿಗಳಿಗೆ ಅವಶ್ಯವಿರುವ ಸಸ್ಯಗಳನ್ನು ಕಾಡಿನಲ್ಲಿ ಬೆಳೆಸುವುದು. ಕುಡಿಯಲು ನೀರು ಗುಂಡಿಗಳು ಬತ್ತದಂತೆ ಸೌರ್ ಪಂಪ್‌ಸೆಟ್ ಮೂಲಕ ಕೊಳವೆ ಬಾವಿಗಳಿಂದ ನೀರು ಹರಿಸುವುದು ಸೇರಿದಂತೆ ಪ್ರಾಣಿಗಳು ನಾಡಿಗೆ ಬರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಬೇಸಿಗೆಯಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡು ಅರಣ್ಯ ನಾಶವಾಗುತ್ತದೆ. ಇದಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಒಂದು ವೇಳೆ ಕಾಡ್ಗಿಚ್ಚು ಕಾಣಿಸಿಕೊಂಡರೆ ಕೂಡಲೇ ನಂದಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾಗೆಯೇ ಅಗ್ನಿಶಾಮಕ ಸಿಬ್ಬಂದಿ ಸನ್ನದ್ದವಾಗಿರುವಂತೆ ನಿರ್ದೇಶಿಸಲು ಸೂಚಿಸಿದರು.
ಮೈಸೂರು ನಗರವನ್ನು ಏಕ ಪ್ಲಾಸ್ಟಿಕ್ ಮುಕ್ತ ನಗರವೆಂದು ಘೋಷಿಸಿದ್ದು, ನಗರದಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಲೋಟ, ಬಾಟಲಿ ಸೇರಿದಂತೆ ಒಂದು ಬಾರಿ ಬಳಸಿ ಬೀಸಾಡುವ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು. ತಪಾಸಣೆ ನಡೆಸಿ ಈ ರೀತಿಯ ಪ್ಲಾಸ್ಟಿಕ್ ಬಳಸುವ ಅಂಗಡಿಗಳಿಗೆ ದಂಡ ವಿಧಿಸಲು ಸೂಚನೆ ನೀಡಿದರು.
ರಾಜ್ಯದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ತರಾಗುತ್ತಿರುವ ಘಟನೆಗಳು ಇತ್ತೀಚಿಗೆ ವರದಿಯಾದ ಹಿನ್ನಲೆಯಲ್ಲಿ, ಕುಡಿಯುವ ನೀರು ಪೂರೈಕೆ ಮಾಡುವ ಟ್ಯಾಂಕ್‌ಗಳ ನೀರಿನ ಗುಣಮಟ್ಟ ಪರೀಕ್ಷಿಸುವಂತೆ ಪರಿಸರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮೈಸೂರು ವೃತ್ತದ ಸಿಸಿಎಫ್ ಮಾಲತಿ ಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್. ಬಸವರಾಜು ಹಾಗೂ ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದರು.