ಮೈಸೂರು: ತಾಲೂಕು ಕೇಂದ್ರಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. ಭೂಗಳ್ಳರಿಂದ ರೈತರು ಮೋಸ ಹೋಗುತ್ತಿದ್ದು, ಸರ್ಕಾರ ಕೂಡಲೇ ಇತ್ತ ಗಮನಹರಿಸಿ ರೈತರ ಸಮಸ್ಯೆ ಬಗೆಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ (ರೈತ ಬಣ)ದ ರಾಜ್ಯಾಧ್ಯಕ್ಷ ಇ.ಎನ್.ಕೃಷ್ಣೇಗೌಡ ಒತ್ತಾಯಿಸಿದರು.
ಇಂದು (ಫೆ.4) ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಕೆಲವರು ರೈತರ ಸೋಗಿನಲ್ಲಿ ಹಸಿರು ಟವಲ್ ಧರಿಸಿ ನಿಜವಾದ ರೈತರಿಗೆ ಮೋಸ ಮಾಡುತ್ತಿದ್ದಾರೆ.
ಜತೆಗೆ ಭೂಗಳ್ಳರ ಹಾವಳಿ ಹೆಚ್ಚಾಗಿದ್ದು, ಅಧಿಕಾರಿಗಳು ಭೂಗಳ್ಳರೊಂದಿಗೆ ಕೈ ಜೋಡಿಸಿ ಸರ್ಕಾರಿ ಭೂಮಿ ಕಬಳಿಸುತ್ತಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು. ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಮತ್ತೊಂದು ಮುಡಾ ಹಗರಣದಂತಾಗುತ್ತದೆ ಎಂದು ಎಚ್ಚರಿಸಿದರು.
ಜಮೀನು ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ಕೊಡಬೇಕು. ದುಡ್ಡಿಗಾಗಿ ಯಾರದೋ ಜಮೀನನ್ನು ಯಾರದೋ ಹೆಸರಿಗೆ ಮಾಡಿದರೆ ರೈತರನ್ನು ಒಗ್ಗೂಡಿಸಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ವಿಧಾನಸೌಧ ಚಲೋ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ ಹಾಕಿ:
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಹೆಚ್ಚಾಗಿದೆ. ಸಾಲಕ್ಕೆ ಹೆದರಿ ರೈತರು ಊರು ಬಿಡುತ್ತಿದ್ದಾರೆ. ಹಲವು ಕಡೆ ಪ್ರತಿನಿತ್ಯ ಒಬ್ಬರಲ್ಲ ಒಬ್ಬರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕ್‌ಗಳು ನಿಗದಿತ ಸಮಯಕ್ಕೆ ರೈತರಿಗೆ, ಜನ ಸಾಮಾನ್ಯರಿಗೆ ಸಾಲ ನೀಡದ ಕಾರಣ ರೈತರು ಖಾಸಗಿ ಬ್ಯಾಂಕ್, ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಪಡೆಯುತ್ತಿದ್ದಾರೆ. ಮೊದಲು ಸಾಲ ಕೊಡುವ ಮೈಕ್ರೋ ಫೈನಾನ್ಸ್‌ಗಳು ನಂತರ ಜನರ ರಕ್ತ ಹೀರುವ ಕೆಲಸ ಮಾಡುತ್ತಿವೆ. ಇದರ ವಿರುದ್ಧ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತರಲು ಮುಂದಾಗಿರುವುದು ಸ್ವಾಗತಾರ್ಹ ಎಂದರು.