ಮೈಸೂರು: ಕಾಂಗ್ರೆಸ್ ಸರ್ಕಾರ ಕರ್ನಾಟಕ ಪೊಲೀಸ್ ಇಲಾಖೆಗೆ ಕಳಂಕ ತರುವ ಕೆಲಸ ಮಾಡಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ಬಗ್ಗೆ ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ಬೇಜವಾಬ್ದಾರಿತನದಿಂದ ಸಂಭ್ರಮಾಚರಣೆ ಶೋಕಾಚರಣೆ ಆಯಿತು. ಸಿದ್ದರಾಮಯ್ಯ ಬರೀ ಒರಟು ವ್ಯಕ್ತಿ ಅಂದುಕೊಂಡಿದ್ದೆ. ಆದರೆ ನೀವು ಸಂವೇದನೆ ಇಲ್ಲದ ಮನುಷ್ಯ ಎಂಬುದು ನಿನ್ನೆ ಗೊತ್ತಾಯಿತು. ಸಿಎಂ ಮೊಮ್ಮಗ, ಸಚಿವರು ಹಾಗೂ ಅಧಿಕಾರಿಗಳ ಮಕ್ಕಳ ಫೋಟೋಶೂಟ್, ಆಟೋಗ್ರಾಫ್‌ಗಾಗಿ ವಿಧಾನಸೌಧದ ಮುಂದೆ ಕಾರ್ಯಕ್ರಮ ನಡೆಯಿತು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇನ್ನು ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ್‌ಗೆ ಭದ್ರತೆಯ ಪಾಠ ಮಾಡಿದ್ದ ಸಂತೋಷ್ ಲಾಡ್, ಪ್ರಿಯಾಂಕ ಖರ್ಗೆ ಈಗ ಎಲ್ಲಿ ಹೋದ್ರು? ಎಂದು ಪ್ರಶ್ನಿಸಿದ ಅವರು, ಯುಪಿ ಸಿಎಂ 60 ಕೋಟಿ ಜನರನ್ನು ಸಂಭಾಳಿಸಿದ್ದಾರೆ, ನೀವು 60 ಸಾವಿರ ಜನರನ್ನು ಸಂಭಾಳಿಸಲು ಆಗಲಿಲ್ಲ. ಕಾಂಗ್ರೆಸ್‌ಗೆ ದರಿದ್ರ ಬಂದಿದೆ. ಆರ್‌ಸಿಬಿ ಗೆಲುವಲ್ಲಿ ಪ್ರಚಾರ ಪಡೆಯಲು ಜನರನ್ನು ಬಲಿ ಕೊಟ್ಟಿದೆ. ಡಿಸಿಎಂ ಶಾಲು, ಗ್ಲಾಸ್ ಹಾಕಿಕೊಂಡು ಪೋಸ್ ಕೊಟ್ಟಿದ್ದೆ ಕೊಟ್ಟಿದ್ದು. ಅದನ್ನು ಬಿಟ್ಟು ಯಾವ ತಯಾರಿಯೂ ನಡೆದಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇನ್ನು ವಿರಾಟ್ ಕೋಹ್ಲಿ ಫೋನ್ ಮಾಡಿ ಇವತ್ತೆ ಬೆಂಗಳೂರಿಗೆ ಬಂದು ಬಿಡ್ತೀನಿ ಪ್ರೋಗ್ರಾಂ ಮಾಡಿ ಅಂದಿದ್ರಾ? ನಿಮಗೆ ಮರುದಿನವೇ ಕಾರ್ಯಕ್ರಮ ಮಾಡುವ ಒತ್ತಡ ಏನಿತ್ತು ಹೇಳಿ? ಎಂದು ಪ್ರಶ್ನಿಸಿದ ಅವರು, ರೋಡ್ ಶೋ ಮಾಡಿದ್ದರೆ ಲಕ್ಷಾಂತರ ಜನ ನೋಡುತ್ತಿದ್ದರು. ಸರ್ಕಾರಕ್ಕೆ ಮಿನಿಮಮ್ ಕಾಮನ್ ಸೆನ್ಸ್ ಇದ್ದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಜಮೀರ್ ಮಗ, ರಿಜ್ವಾನ್ ಮಗ, ಮುಖ್ಯ ಕಾರ್ಯದರ್ಶಿ ಮಗಳು, ಸಿಎಂ ಮೊಮ್ಮಗನಿಗಾಗಿ ವಿಧಾನಸೌಧದ ಮುಂದೆ ಕಾರ್ಯಕ್ರಮ ಮಾಡಿದ್ರಾ? ಎಂದು ಅನುಮಾನ ವ್ಯಕ್ತಪಡಿಸಿದರು.
ಇನ್ನು ಆಂಧ್ರದಲ್ಲಿ ನಟ ಅಲ್ಲು ಅರ್ಜುನ್‌ರನ್ನು ಕಾಲ್ತುಳಿತ ಪ್ರಕರಣದಿಂದಲೇ ಅರೆಸ್ಟ್ ಮಾಡಿದ್ರು. ಈಗ ಇಲ್ಲಿ ಸಿಎಂ ಅರೆಸ್ಟ್ ಆಗುತ್ತಾರಾ? ಡಿಸಿಎಂ ಅರೆಸ್ಟ್ ಆಗುತ್ತಾರಾ? ಗೃಹಮಂತ್ರಿ ತಲೆದಂಡ ಆಗುತ್ತಾ? ಇದಕ್ಕೆ ಯಾರು ಹೊಣೆ ಹೇಳಿ ಎಂದರು. ಒಟ್ಟಾರೆಯಾಗಿ ಈ ಘಟನೆಯಿಂದ ಕರ್ನಾಟಕ ಪೊಲೀಸ್ ಇಲಾಖೆಗೆ ಕಳಂಕ ತರುವ ಕೆಲಸವಾಗಿದೆ. ಘಟನೆಗೆ ನೇರವಾಗಿ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.





